ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad Landslides | ಕೇಂದ್ರ ಸರ್ಕಾರ ಕೇರಳದೊಂದಿಗೆ ನಿಲ್ಲಲಿದೆ: ಮೋದಿ ಭರವಸೆ

Published 10 ಆಗಸ್ಟ್ 2024, 13:53 IST
Last Updated 10 ಆಗಸ್ಟ್ 2024, 13:53 IST
ಅಕ್ಷರ ಗಾತ್ರ

ವಯನಾಡ್: ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ತೊಂದರೆಗೆ ಒಳಗಾಗಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ರಕ್ಷಣೆ ಹಾಗೂ ಪುನರ್ವಸತಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭರವಸೆ ನೀಡಿದರು.

ದುರಂತದಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ನೆರವು ನೀಡುವ ಕೆಲಸದಲ್ಲಿ ಕೇಂದ್ರ ಸರ್ಕಾರವು ಕೇರಳ ಸರ್ಕಾರದ ಜೊತೆ ಇರಲಿದೆ ಎಂದು ಅವರು ಹೇಳಿದರು.

ಪರಿಹಾರ ಹಾಗೂ ಪುನರ್ವಸತಿ ಕ್ರಮಗಳು, ಅನಾಥರಾದ ಮಕ್ಕಳಿಗೆ ದೀರ್ಘಾವಧಿಯಲ್ಲಿ ಅಗತ್ಯವಿರುವ ನೆರವುಗಳ ಬಗ್ಗೆ ವಿಸ್ತೃತವಾದ ಮನವಿಪತ್ರ ನೀಡುವಂತೆ ಮೋದಿ ಅವರು ಕೇರಳ ಸರ್ಕಾರಕ್ಕೆ ತಿಳಿಸಿದರು. ‘ಕೇರಳದ ಮನವಿಪತ್ರದ ವಿಚಾರವಾಗಿ ಕೇಂದ್ರ ಉದಾರ ಮನಸ್ಸಿನಿಂದ ನಿಲುವು ತಾಳಲಿದೆ’ ಎಂದರು.

ಭೂಕುಸಿತ ಸಂಭವಿಸಿದ ಕಡೆಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ನಡೆಸುವುದಕ್ಕೆ ಹಾಗೂ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಯೋಜನೆಯೊಂದನ್ನು ರೂಪಿಸುವುದಕ್ಕೆ ಸಂಬಂಧಿಸಿದಂತೆ ಡಿ.ಸಿ. ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಪ್ರಧಾನಿ ಮಾತನಾಡಿದರು. ದುರಂತ ಸಂಭವಿಸಿದಾಗಿನಿಂದಲೂ ಪ್ರಧಾನಿಯವರು ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ.

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್ ಗೋಪಿ, ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಮೋದಿ ಅವರು ನಿಗದಿಯಂತೆ ವಯನಾಡ್‌ನಲ್ಲಿ ಮೂರು ತಾಸು ಇರಬೇಕಿತ್ತು. ಆದರೆ ಅವರು ಐದು ತಾಸಿಗೂ ಹೆಚ್ಚು ಕಾಲ ಅಲ್ಲಿದ್ದರು. ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದ ಮೋದಿ ಅವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಯನಾಡ್‌ ತಲುಪಿದರು. ಭೂಕುಸಿತದಿಂದಾಗಿ ಹಾನಿಗೆ ಒಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.  ಕಲ್ಪೆಟ್ಟದ ಎಸ್‌ಕೆಎಂಜೆ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಳಿದ ಮೋದಿ ಅವರು ರಸ್ತೆ ಮಾರ್ಗವಾಗಿ ಚೂರಲ್‌ಮಲಕ್ಕೆ ತೆರಳಿದರು. ಹಾನಿಯ ತೀವ್ರತೆಯನ್ನು ವೀಕ್ಷಿಸುವ ಸಂದರ್ಭದಲ್ಲಿ ಮೋದಿ ಅವರು, ಸೇನೆಯು ನಿರ್ಮಿಸಿರುವ ತಾತ್ಕಾಲಿಕ ಸೇತುವೆಯ ಮೇಲೆ ನಡೆದರು.

ಪುನರ್ವಸತಿಗೆ ₹2,000 ಕೋಟಿ ಕೋರಿಕೆ
ವಯನಾಡ್ (ಪಿಟಿಐ): ಭೂಕುಸಿತ, ದಿಢೀರ್ ಪ್ರವಾಹದ ಕಾರಣದಿಂದಾಗಿ ವಯನಾಡ್ ಪ್ರದೇಶದಲ್ಲಿ ಆಗಿರುವ ನಷ್ಟದ ಮೊತ್ತವು ₹1,200 ಕೋಟಿ ಎಂದು ಕೇರಳದ ಕಂದಾಯ ಸಚಿವ ಕೆ. ರಾಜನ್ ತಿಳಿಸಿದರು. ಪುನರ್ವಸತಿಗಾಗಿಯೇ ಕೇಂದ್ರದಿಂದ ₹2,000 ಕೋಟಿ ಕೋರಲಾಗಿದೆ ಎಂದರು. ರಾಜ್ಯದ ಕೋರಿಕೆಗಳಿಗೆ ಕೇಂದ್ರವು ಪೂರಕವಾಗಿ ಸ್ಪಂದಿಸಲಿದೆ ಎಂಬ ಭರವಸೆಯನ್ನು ಪ್ರಧಾನಿ ಜೊತೆಗಿನ ಸಭೆಯಲ್ಲಿ ಭಾಗಿಯಾಗಿದ್ದ ಕೆಲವು ಸಚಿವರು ವ್ಯಕ್ತಪಡಿಸಿದ್ದಾರೆ.

ಮನೆ ಕಳೆದುಕೊಂಡವರು ಇರುವ ಶಿಬಿರವೊಂದಕ್ಕೆ ಭೇಟಿ ನೀಡಿದರು. ಅಲ್ಲಿನ ಕೆಲವರ ಜೊತೆ ಮಾತುಕತೆ ನಡೆಸಿದರು. ಅವರ ಜೊತೆ ಮಾತನಾಡಿ, ಅವರ ಬೇಡಿಕೆಗಳ ಬಗ್ಗೆ ಆಲಿಸಿದರು. ಅಲ್ಲದೆ, ಅವರಿಗೆ ಸಮಾಧಾನ ಹೇಳಲು ಯತ್ನಿಸಿದರು.

ನಡೆದ ದುರ್ಘಟನೆಯನ್ನು ಪ್ರಧಾನಿಯವರ ಎದುರು ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವು ಸಂತ್ರಸ್ತರು ಕಣ್ಣೀರು ಹಾಕಿದರು. ಮೋದಿ ಅವರು, ಸಂತ್ರಸ್ತರ ಭುಜದ ಮೇಲೆ ಕೈ ಇರಿಸಿ, ತಲೆ ಸವರಿ ಸಂತೈಸಲು ಯತ್ನಿಸಿದರು.

ದುರ್ಘಟನೆಯಲ್ಲಿ ಗಾಯಗೊಂಡಿರುವವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ ಮೋದಿ ಅವರು, ಅಗತ್ಯ ನೆರವಿನ ಭರವಸೆಯನ್ನು ಸಂತ್ರಸ್ತರಿಗೆ ನೀಡಿದರು.

ರಾಜ್ಯದ ಮನವಿಗಳಿಗೆ ಪ್ರಧಾನಿಯವರು ಪೂರಕವಾಗಿ ಸ್ಪಂದಿಸಿದರು ಎಂದು ಕೇರಳದ ಸಚಿವರಾದ ಕೆ. ರಾಜನ್ ಹಾಗೂ ಎ.ಕೆ. ಶಶೀಂದ್ರನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT