ನವದೆಹಲಿ: 300ಕ್ಕೂ ಅಧಿಕ ಮಂದಿ ಸಾವಿಗೆ ಕಾರಣವಾದ ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತಕ್ಕೆ ಹವಾಮಾನ ಬದಲಾವಣೆಯಿಂದಾಗಿ ಸುರಿದ ಶೇ 10ಕ್ಕಿಂತಲೂ ಅಧಿಕ ಮಳೆಯೇ ಕಾರಣ ಎಂದು ಜಾಗತಿಕ ವಿಜ್ಞಾನಿಗಳ ತಂಡ ನಡೆಸಿದ ಕ್ಷಿಪ್ರ ಗುಣಲಕ್ಷಣ ಅಧ್ಯಯನದಿಂದ ತಿಳಿದುಬಂದಿದೆ.
ಭಾರತ, ಸ್ವೀಡನ್ ಅಮೆರಿಕ ಮತ್ತು ಬ್ರಿಟನ್ ವಿಜ್ಞಾನಿಗಳ ತಂಡ ಅಧ್ಯಯನದಲ್ಲಿ ಭಾಗವಹಿಸಿತ್ತು. ತಾಪಮಾನ ಏರಿಕೆ ಆಗುತ್ತಿದ್ದಂತೆ ಈ ರೀತಿಯ ಮತ್ತಷ್ಟು ವಿಪತ್ತುಗಳು ಸಂಭವಿಸಲಿವೆ ಎಂದು ಅವರು ಎಚ್ಚರಿಸಿದ್ದಾರೆ.
ವರ್ಲ್ಡ್ ವೆದರ್ ಆಟ್ರಿಬ್ಯೂಷನ್(ಡಬ್ಲ್ಯುಡಬ್ಲ್ಯುಎ) ತಂಡವು ಮಾನವನಿಂದ ಆಗುತ್ತಿರುವ ಹವಾಮಾನ ಬದಲಾವಣೆ ಕುರಿತಂತೆ ಅತ್ಯಾಧುನಿಕ ವಿಧಾನವನ್ನು ಅನುಸರಿಸಿ ಅತ್ಯಂತ ನಿಖರವಾಗಿ ಅಧ್ಯಯನ ನಡೆಸಿದೆ. ವಿವಿಧ ಮಾದರಿಗಳನ್ನು ಇದಕ್ಕಾಗಿ ಬಳಸಲಾಗಿದೆ.
ಈ ಮಾದರಿಗಳಲ್ಲಿ ಹವಾಮಾನ ಬದಲಾವಣೆ ಪರಿಣಾಮ ಶೇ 10ರಷ್ಟು ಮಳೆ ಹೆಚ್ಚಾಗಿ ವಯನಾಡು ಭೂಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸರಾಸರಿ ಜಾಗತಿಕ ತಾಪಮಾನವು ಇನ್ನೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾದರೆ ಇನ್ನೂ ಶೇಕಡ 4ರಷ್ಟು ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಅದು ಹೇಳಿದೆ.
ವಾತಾವರಣದಲ್ಲಿ ಉನ್ನತ ಮಟ್ಟದ ಅನಿಶ್ಚಿತತೆ ಕುರಿತಂತೆಯೂ ಅಧ್ಯಯನದಲ್ಲಿ ತಿಳಿದುಬಂದಿದ್ದು, ಭೂಪ್ರದೇಶ ಮತ್ತು ಪರ್ವತ ಶ್ರೇಣಿಗಳಲ್ಲಿ ಸಂಕೀರ್ಣ ಮಳೆಬೀಳುವ ಸಾಧ್ಯತೆಯನ್ನು ಅಧ್ಯಯನ ತೋರಿಸಿದೆ.
ತಾಪಮಾನ ಏರಿಕೆ ಪರಿಣಾಮ ವಿಶ್ವದಾದ್ಯಂತ ಅಧಿಕ ಮಳೆ ಬೀಳುವ ದಿನಗಳು ಭಾರತ ಸೇರಿದಂತೆ ವಿಶ್ವದಾದ್ಯಂತ ಹೆಚ್ಚಾಗಿದೆ.
ಹವಾಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಹೆಚ್ಚಾದಂತೆ ಶೇ 7ರಷ್ಟು ತೇವಾಂಶವನ್ನು ಹಿಡಿದಿಡುವಿಕೆ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.