ನವದೆಹಲಿ: ವೈದ್ಯ ವಿದ್ಯಾರ್ಥಿನಿ ಹತ್ಯೆ, ಅತ್ಯಾಚಾರದ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಪ್ರಭಟನೆಯ ಕಾವು ಏರುತ್ತಿದ್ದು, ರಾಜ್ಯಪಾಲ ಸಿ.ವಿ. ಆನಂದ ಬೋಸ್ ಸೋಮವಾರ ರಾತ್ರಿ ದೆಹಲಿಗೆ ದೌಡಾಯಿಸಿದ್ದಾರೆ.
ಆನಂದ ಬೋಸ್ ಇಂದು (ಮಂಗಳವಾರ) ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಿರಿಯ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕಳೆದ ಗುರುವಾರ ವಿದ್ಯಾರ್ಥಿನಿಯ ಹತ್ಯೆ ನಡೆದಿದ್ದ ಆರ್.ಜಿ ಕರ್ ಆಸ್ಪತ್ರೆಗೆ ಭೇಟಿ ನೀಡಿದ್ದ ಆನಂದ ಬೊಸ್, ಕಿರಿಯ ವೈದ್ಯರನ್ನು ಭೇಟಿಯಾಗಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು.
ಕೋಲ್ಕತ್ತದ ರಾಜಭವನದಲ್ಲಿ ರಕ್ಷಾ ಬಂಧನ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಲವಾರು ಮಹಿಳಾ ವೈದ್ಯರು ಮತ್ತು ಇತರರು ಕೈಗಳಿಗೆ ರಾಖಿಗಳನ್ನು ಕಟ್ಟಿದರು. ಎಲ್ಲಾ ಮಹಿಳೆಯರಿಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಗುರಿಯನ್ನು ಸಾಧಿಸುವವರೆಗೆ ನ್ಯಾಯ ಕೊಡಿಸುವ ಪ್ರಯತ್ನ ಮುಂದುವರಿಯಲಿದೆ’ ಎಂದು ವಾಗ್ದಾನ ಮಾಡಿದರು.
‘ರಾಜ್ಯಪಾಲರಾಗಿ ಜನಸೇವೆ ಮಾಡುವುದು ನನ್ನ ಜವಾಬ್ದಾರಿ. ಗುರಿ ದೂರವಿದೆ ಎಂದು ನನಗೆ ತಿಳಿದಿದೆ, ಆದರೆ ಪ್ರಯತ್ನ ಮುಂದುವರಿಯಲಿದೆ. ನಾವು ಖಂಡಿತವಾಗಿಯೂ ನಮ್ಮ ಗಮ್ಯಸ್ಥಾನವನ್ನು ತಲುಪುತ್ತೇವೆ. ನಾನು ನಿಮ್ಮೊಂದಿಗಿದ್ದೇನೆ’ ಎಂದು ಹೇಳಿದರು.