ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲ್ಕ್ಯಾರಾದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು; ಅಲ್ಲಿ ನಡೆದದ್ದೇನು?

Published 28 ನವೆಂಬರ್ 2023, 13:34 IST
Last Updated 28 ನವೆಂಬರ್ 2023, 13:34 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಸಿಲ್ಕ್ಯಾರಾದ ಸುರಂಗ ಜ. 12ರಂದು ಕುಸಿದ ಪರಿಣಾಮ 41 ಕಾರ್ಮಿಕರು ಅದರೊಳಗೆ ಸಿಲುಕಿದ್ದಾರೆ. ಕಳೆದ 17 ದಿನಗಳಿಂದ ಕಾರ್ಮಿಕರನ್ನು ಹೊರಕ್ಕೆ ತರುವ ಕಾರ್ಯ ನಿರಂತರವಾಗಿ ಸಾಗಿದೆ. ಯಂತ್ರಗಳು ಕೈಕೊಟ್ಟ ನಂತರ ಇದೀಗ ನಿಷೇಧಿತ ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಸುರಂಗ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಅಷ್ಟಕ್ಕೂ ಇಲ್ಲಿ ನಡೆದದ್ದೇನು...?

ಕೇಂದ್ರ ಸರ್ಕಾರದ ಪ್ರತಿಷ್ಠಿತ ಚಾರ್‌ ಧಾಮ್‌ ಯೋಜನೆಯ ಭಾಗವೇ ಈ 4.5 ಕಿ.ಮೀ. ಉದ್ದದ ಸಿಲ್ಕ್ಯಾರಾದ ಸುರಂಗ. ಉತ್ತರಾಖಂಡ– ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ಎಲ್ಲಾ ಋತುವಿನಲ್ಲೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಿಲ್ಕ್ಯಾರಾ ಸುರಂಗ ಎಂದೇ ಕರೆಯಲಾಗುವ ಈ ರಸ್ತೆ ಯೋಜನೆಯನ್ನು ಕೇಂದ್ರ ಕೈಗೆತ್ತಿಕೊಂಡಿತು. 

ಈ ಸುರಂಗವು ಸಿಲ್ಕ್ಯಾರಾದಿಂದ ದಾಂಡಲಗಾಂವ್‌ಗೆ ಸಂಪರ್ಕ ಕಲ್ಪಿಸಲಿದೆ. ಎರಡು ಲೇನ್‌ ಹೊಂದಿರುವ ಇದು ಚಾರ್‌ಧಾಮ್‌ ಯೋಜನೆಯಲ್ಲಿ ಅತ್ಯಂತ ಉದ್ದನೆಯ ಸುರಂಗವಾಗಿದೆ. ಸದ್ಯ ಸಿಲ್ಕ್ಯಾರಾದ ಕಡೆಯಿಂದ 2.4 ಕಿ.ಮೀ. ಹಾಗೂ ಮತ್ತೊಂದು ಬದಿಯಿಂದ 1.75 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ ಸುಮಾರು ಒಂದು ಗಂಟೆಯ ಪ್ರಯಾಣ ಅವಧಿ ಕಡಿತಗೊಳ್ಳಲಿದೆ. ಈ ಸುರಂಗದ ಕಾಮಗಾರಿಯನ್ನು ಹೈದರಾಬಾದ್ ಮೂಲದ ನವಯುಗ್ ಎಂಜಿನಿಯರಿಂಗ್ ಕಂಪನಿ ವಹಿಸಿಕೊಂಡಿದೆ. 

ಸಮಸ್ಯೆ ಉಂಟಾಗಿದ್ದು ಎಲ್ಲಿ?

ನ. 12ರಂದು ಸಿಲ್ಕ್ಯಾರಾ ಕಡೆಯ ಸುರಂಗದಲ್ಲಿನ 205 ಹಾಗೂ 260 ಮೀಟರ್‌ ಅಂತರದಲ್ಲಿ ಸುರಂಗ ಕುಸಿಯಿತು. 260 ಮೀಟರ್‌ ಕಡೆ ಇರುವ ಕಾರ್ಮಿಕರು ಸುರಂಗದೊಳಗೆ ಸಿಲುಕಿದರು. ಹೀಗಾಗಿ ಅವರು ಹೊರಬರಲು ಅವಕಾಶವೇ ಇಲ್ಲವಾಯಿತು. ಆದರೆ ಇವರು ಸಿಲುಕಿರುವ ಪ್ರದೇಶದಲ್ಲಿ ನೀರು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆ ಇತ್ತು.‌

ಸುರಂಗ ಕುಸಿತ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಿಮಾಲಯದ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಈ ಸಮಸ್ಯೆ ಎದುರಾಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆತುರದಲ್ಲಿ ಕೈಗೊಂಡ ಕಾಮಗಾರಿಯಿಂದಲೂ ಇಂಥ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂಬ ಮಾತುಗಳೂ ಹೇಳಿಬಂದಿವೆ.

ಸುರಂಗ ನಿರ್ಮಾಣ ಸಂದರ್ಭದಲ್ಲಿ ಸ್ಫೋಟಕ ಬಳಸಿರುವ ಸಾಧ್ಯತೆ ಇದ್ದು, ಅದರಿಂದಲೂ ಗುಡ್ಡ ಕುಸಿದಿರಬಹುದು ಎಂದೆನ್ನಲಾಗಿದೆ. ಆದರೆ ಇದನ್ನು ತನಿಖಾ ತಂಡ ಒಪ್ಪಿಕೊಳ್ಳುವುದಿಲ್ಲ ಎಂದು ಉತ್ತರಾಖಂಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್‌.ಪಿ.ಸೇಠಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಅಂತರರಾಷ್ಟ್ರಿಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಜಾಗತಿ ಮಟ್ಟದಲ್ಲಿ ಸುರಂಗ ನಿರ್ಮಾಣದಲ್ಲಿ ಸುರಕ್ಷಿತವಾಗಿ ಹೊರಬರುವ ಮಾರ್ಗ ಕೊನೆಯಲ್ಲಿರುತ್ತದೆ. ಏಕೆಂದರೆ, ಸುರಂಗ ಕುಸಿಯಲಿ ಎಂದು ಯಾರೂ ಬಯಸುವುದಿಲ್ಲ. ಆದರೆ ಕೆಲವೊಂದು ಭೂಪ್ರದೇಶದ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಮಿಕರು ಪಾರಾಗಲು ಸುರಂಗವನ್ನು ಹೊಂದುವುದು ಅಗತ್ಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT