ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ
ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ
Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಉತ್ತರಕಾಶಿಯ ಸಮೀಪದ ಸಿಲ್ಕ್ಯಾರಾ ತಿರುವು ಮತ್ತು ಬಡಕೋಟ್‌ ನಡುವಣ ಸುರಂಗ ಮಾರ್ಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಪ್ರತಿದಿನವೂ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಲೇ ಇದೆ. ಅತ್ಯಂತ ಸೂಕ್ಷ್ಮ ಮತ್ತು ಸಡಿಲ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ಈ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆಗೆ, ಇಲ್ಲಿನ ಭೂಲಕ್ಷಣವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಮಗಾರಿ ನಡೆಸುತ್ತಿದ್ದ ಕಂಪನಿಗಳು, ಸಮುದ್ರದಲ್ಲಿ ಲಂಬ ಸುರಂಗ ಕೊರೆಯುವದರಲ್ಲಿ ಪರಿಣತಿ ಹೊಂದಿರುವ ಒಎನ್‌ಜಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಈಗ ಭಾರತೀಯ ಸೇನೆಯೂ ಕಾರ್ಯಾಚರಣೆಗೆ ಕೈಜೋಡಿಸಿವೆ.

ಇಲ್ಲಿ ಒಟ್ಟು 4.5 ಕಿ.ಮೀ.ನಷ್ಟು ಉದ್ದದ ಸುರಂಗವನ್ನು ನಿರ್ಮಿಸಬೇಕಿತ್ತು. ಸಿಲ್ಕ್ಯಾರಾ ತುದಿಯಿಂದ ಒಟ್ಟು 1.5 ಕಿ.ಮೀ.ನಷ್ಟು ಸುರಂಗ ನಿರ್ಮಾಣ ಕಾಮಗಾರಿ ಮುಗಿದಿದೆ. ಸುರಂಗ ಕೊರೆದು, ಅದರಲ್ಲಿ ಅರ್ಧಬಳೆಯಾಕಾರಾದ ಆರ್‌ಸಿಸಿ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಬಡಕೋಟ್‌ ತುದಿಯಿಂದಲೂ 1.7 ಕಿ.ಮೀ.ನಷ್ಟು ಉದ್ದದ ಸುರಂಗವನ್ನು ಕೊರೆದು, ಆರ್‌ಸಿಸಿ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಇದರ ಮಧ್ಯೆ ಇನ್ನೂ 477 ಮೀಟರ್‌ನಷ್ಟು ಸುರಂಗವನ್ನು ಕೊರೆಯುವ ಕಾರ್ಯ ಉಳಿದಿತ್ತು.

ಸುರಂಗ ಕೊರೆಯುವ ಮತ್ತು ಆರ್‌ಸಿಸಿ ಸ್ಲ್ಯಾಬ್‌ ಅಳವಡಿಸುವ ಕಾರ್ಯವನ್ನು ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ನಡೆಸಲಾಗುತ್ತಿತ್ತು. ಅದೇ ರೀತಿ ನವೆಂಬರ್ 12ರ ನಸುಕಿನಲ್ಲಿ ಸಿಲ್ಕ್ಯಾರಾ ಬೆಂಡ್‌ ಕಡೆಯಿಂದ ಸುರಂಗ ಕೊರೆಯಲು 50ಕ್ಕೂ ಹೆಚ್ಚು ಕಾರ್ಮಿಕರು ಸುರಂಗದೊಳಗೆ ತೆರಳಿದ್ದರು. ಇದರಲ್ಲಿ 41 ಮಂದಿ ಸಿಲ್ಕ್ಯಾರಾ ಪ್ರವೇಶದ್ವಾರದಿಂದ 2,300 ಮೀಟರ್‌ ದೂರದಲ್ಲಿ ಸುರಂಗ ಕೊರೆಯುತ್ತಿದ್ದರು. ಇನ್ನು 9 ಮಂದಿ ಸುರಂಗದ ಪ್ರವೇಶದ್ವಾರದಲ್ಲೇ ಬೇರೆ ಬೇರೆ ಕಾಮಗಾರಿಯಲ್ಲಿ ತೊಡಗಿದ್ದರು. ಪ್ರವೇಶದ್ವಾರದಿಂದ 200 ಮೀಟರ್‌ ದೂರದಲ್ಲಿ ಸುರಂಗದ ಸ್ಲ್ಯಾಬ್‌ಗಳು ಒಡೆದುಹೋಗಿವೆ. ಜತೆಗೆ ಪರ್ವತದ ಮಣ್ಣು ಮತ್ತು ಬಂಡೆಗಲ್ಲುಗಳು ಸುರಂಗದೊಳಗೆ ಕುಸಿದುಬಿದ್ದಿವೆ. ಹೀಗೆ ಅಂದಾಜು 60 ಮೀಟರ್‌ ಉದ್ದದಷ್ಟು ಸುರಂಗವು ಮಣ್ಣು–ಕಲ್ಲುಗಳಿಂದ ಮುಚ್ಚಿಹೋಗಿದೆ. ಅದರ ಹಿಂದೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಬೇಕಿದೆ.

ಆರಂಭದಲ್ಲಿ ಅರ್ಥ್‌ಮೂವರ್‌ ಯಂತ್ರಗಳನ್ನು ಬಳಸಿ ಈ ಮಣ್ಣು ಮತ್ತು ಕಲ್ಲುಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕೆಲವೇ ಮೀಟರ್‌ನಷ್ಟು ಮಣ್ಣನ್ನು ತೆರವು ಮಾಡಿದ ಬೆನ್ನಲೇ, ಪರ್ವತದ ಆ ಭಾಗವು ಮತ್ತೆ ಕುಸಿದಿತ್ತು. ಈ ಕಾರಣದಿಂದ ಆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಸಣ್ಣ ಸುರಂಗವನ್ನು ಕೊರೆದು, ಕೊಳವೆಯನ್ನು ಅಳವಡಿಸಲಾಯಿತು. ಅದರ ಕೊಳವೆಯ ಮೂಲಕ ಆಮ್ಲಜನಕ, ಆಹಾರ, ನೀರು, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಜತೆಗೆ ಕ್ಯಾಮೆರಾ, ಮೊಬೈಲ್‌, ಔಷಧಗಳನ್ನೂ ಕಳುಹಿಸಲಾಗುತ್ತಿದೆ.

ಎರಡನೇ ಹಂತದ ಕಾರ್ಯಾಚರಣೆಯ ಭಾಗವಾಗಿ ಈ 60 ಮೀಟರ್‌ನಷ್ಟು ಉದ್ದವಿರುವ ಅವಶೇಷದಲ್ಲಿ 900 ಮಿಲಿಮೀಟರ್‌ ವ್ಯಾಸದ ಸುರಂಗ ಕೊರೆದು, ಅದರೊಳಗೆ ದೊಡ್ಡ ಕೊಳವೆಗಳನ್ನು ಅಳವಡಿಸಬೇಕಿತ್ತು. ಈ ಕಾಮಗಾರಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಹಲವು ದಿನಗಳ ಕಾಲ ನಡೆದ ಈ ಕಾಮಗಾರಿಯು ಈಗಾಗಲೇ 10ಕ್ಕೂ ಹೆಚ್ಚು ಬಾರಿ ಸ್ಥಗಿತಗೊಂಡಿದೆ. ಈ ಕಾಮಗಾರಿಗೆ ಬಳಸಿದ ನಾಲ್ಕು ಯಂತ್ರಗಳು ಜಖಂ ಆಗಿವೆ. ಈ ಯಂತ್ರಗಳ ಮೂಲಕ ಈವರೆಗೆ 46.8 ಮೀಟರ್‌ನಷ್ಟು ದೂರದವರೆಗೆ ಅವಶೇಷವನ್ನು ಕೊರೆದು, ಕೊಳವೆಗಳನ್ನು ಅಳವಡಿಸಲಾಗಿದೆ. ಯಂತ್ರಗಳ ಮೂಲಕ ಕಾರ್ಯಾಚರಣೆ ಸ್ಥಗಿತಗೊಳಿಸಿದಾಗ ಇನ್ನೂ 13–14 ಮೀಟರ್‌ನಷ್ಟು ಉದ್ದದ ಸುರಂಗ ಕೊರೆಯಬೇಕಿತ್ತು. ಈಗ ಹಾರೆ–ಪಿಕಾಸಿ–ಗುದ್ದಲಿಗಳನ್ನು ಬಳಸಿ ಸುರಂಗ ಕೊರೆಯುವ ಕಾರ್ಯವನ್ನು ಸೈನಿಕರು, ರಕ್ಷಣಾ ಸಿಬ್ಬಂದಿ ಮಾಡುತ್ತಿದ್ದಾರೆ.

ಹೀಗೆ ಸುರಂಗದ ತಳಭಾಗಕ್ಕೆ ಸಮಾನಾಂತರವಾಗಿ ಸುರಂಗ ಕೊರೆಯುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯಲ್ಲೇ, ಸುರಂಗದ ಮೇಲ್ಭಾಗದಿಂದ ಮತ್ತೊಂದು ಲಂಬ ಸುರಂಗವನ್ನು ಕೊರೆಯುವ ಕಾಮಗಾರಿ ಆರಂಭಿಸಲಾಗಿತ್ತು. ಸುರಂಗದ ಸೂರಿನಿಂದ 83 ಮೀಟರ್‌ಗಳಷ್ಟು ಎತ್ತರದಲ್ಲಿರುವ ಪರ್ವತದ ಒಂದು ಭಾಗದಿಂದ ಲಂಬ ಸುರಂಗ ಕೊರೆಯುವ ಕಾಮಗಾರಿ ಅದಾಗಿತ್ತು. ಆದರೆ ಆ ಭಾಗವು ಸಡಿಲ ಮಣ್ಣಿನಿಂದ ಕೂಡಿರುವುದರಿಂದ, ಮಣ್ಣು ಕುಸಿದು ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಬಂಡೆಗಳಿಂದ ಕೂಡಿದ ಗಟ್ಟಿ ಜಾಗದಲ್ಲಿ ಮತ್ತೊಂದು ಲಂಬ ಸುರಂಗ ಕೊರೆಯುವ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಇದು ಸುರಂಗದ ಸೂರಿನಿಂದ 325 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಹಲವು ವಾರಗಳು ಬೇಕಾಗುತ್ತವೆ.

ಸರ್ಕಾರ ರಚಿಸಿರುವ ತಜ್ಞರ ತಂಡವು, ಅವಘಡದ ನಿರ್ವಹಣೆಗೆ ಕೈಗೊಂಡ ಕ್ರಮಗಳು, ಸುರಂಗ ಕಾಮಗಾರಿ, ಸುರಂಗದ ವಿನ್ಯಾಸದ ಕುರಿತಷ್ಟೇ ತನಿಖೆ ನಡೆಸಬಾರದು. ಸುರಂಗ ಕೊರೆಯುವಾಗ ಸ್ಫೋಟಿಸಲು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ತನಿಖೆ ನಡೆಸಬೇಕು.
–ಹೇಮಂತ್‌ ಧ್ಯಾನಿ, ಪರಿಸರ ಕಾರ್ಯಕರ್ತ

ಇವೆಲ್ಲವುದರ ಜತೆಗೆ ಬಡಕೋಟ್‌ ಕಡೆಯಿಂದ ಕಾಮಗಾರಿ ಬಾಕಿ ಇರುವ 477 ಮೀಟರ್‌ಗಳಷ್ಟು ಸುರಂಗವನ್ನು ಕೊರೆಯುವ ಕಾಮಗಾರಿಯನ್ನೂ ನಡೆಸಲಾಗುತ್ತಿದೆ. ಅಲ್ಲಿ ಪೂರ್ಣ ಪ್ರಮಾಣದ ಸುರಂಗದ ಬದಲಿಗೆ 2.5 ಮೀಟರ್‌ ವ್ಯಾಸದ ಸುರಂಗವನ್ನು ಕೊರೆದು, ಕಾಂಕ್ರೀಟ್‌ ಹಾಕಲಾಗುತ್ತಿದೆ. ಹೀಗೆ ನಾಲ್ಕು ಕಡೆಯಿಂದ ರಕ್ಷಣಾ ಸುರಂಗಗಳನ್ನು ನಿರ್ಮಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆದರೆ, ಸುರಂಗ ಹೆದ್ದಾರಿ ನಿರ್ಮಾಣ ಕಾರ್ಯದ ವೇಳೆ ಹಲವು ಸುರಕ್ಷತಾ ಅಗತ್ಯಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಸುರಂಗ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್‌ ನೇಮಿಸಿದ್ದ ಉನ್ನತ ಅಧ್ಯಯನ ಸಮಿತಿಯೂ, ಅತ್ಯಂತ ದುರ್ಬಲ ಮತ್ತು ಸಡಿಲ ಪ್ರದೇಶದಲ್ಲಿ ಸುರಂಗ ನಿರ್ಮಾಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಈಗ ಅವಘಡ ಸಂಭವಿಸಿರುವ ಕಾರಣ ಈ ಎಲ್ಲಾ ವಿಚಾರಗಳ ಬಗ್ಗೆ ಮತ್ತೆ ಪ್ರಶ್ನೆ ಎದ್ದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ, ಆದರೆ ಈಗ ಕಾರ್ಮಿಕರ ರಕ್ಷಣೆಯೇ ನಮ್ಮ ಆದ್ಯತೆ ಎಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ ಹೇಳಿದೆ. 

‘ಉಲ್ಲಂಘನೆ’

ಸಿಲ್ಕ್ಯಾರಾ–ಬಡಕೋಟ್‌ ಸುರಂಗದಲ್ಲಿ ಎಲ್ಲಿಯೂ ತುರ್ತು ನಿರ್ಗಮನ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿಲ್ಲ. ಇದೇ ಕಾರಣಕ್ಕಾಗಿ ಕಾರ್ಮಿಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಈ ಸುರಂಗ ಕಾಮಗಾರಿಯ ನೀಲಿನಕ್ಷೆಯಲ್ಲಿ ತುರ್ತು ನಿರ್ಗಮನ ಸುರಂಗ ಮಾರ್ಗವನ್ನು ಎಂದು ತೋರಿಸಲಾಗಿತ್ತು. ಆದರೆ, ಸುರಂಗ ನಿರ್ಮಾಣ ಹಂತದಲ್ಲಿ ಈ ಮಾರ್ಗವನ್ನು ನಿರ್ಮಾಣ ಮಾಡದಿರುವುದು ದೊಡ್ಡ ಲೋಪವಾಗಿದೆ. ಸುರಂಗ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಇಲ್ಲಿ ಪಾಲಿಸಲಾಗಿಲ್ಲ ಎನ್ನುವ ಆರೋಪಗಳೂ ಕೇಳಿಬರುತ್ತಿದೆ.

ಕಾರ್ಮಿಕರು ಸಿಲುಕಿಕೊಂಡಿರುವುದಕ್ಕೆ ಕಾರಣಗಳು ಹಾಗೂ ಕಾಮಗಾರಿಯನ್ನು ಯಾವ ರೀತಿಯಲ್ಲಿ ಕೈಗೊಳ್ಳಲಾಗಿದೆ ಎನ್ನುವ ಕುರಿತು ತನಿಖೆ ನಡೆಸುತ್ತಿರುವ ತಜ್ಞರ ತಂಡದ ಸದಸ್ಯರೊಬ್ಬರ ಅಭಿಪ್ರಾಯವೂ ಇದೇ ಆಗಿದೆ. ‘ಸುರಂಗ ನಿರ್ಮಾಣ ಮಾಡಲಾಗುತ್ತಿರುವ ಭೂಲಕ್ಷಣದ ಕಾರಣದಿಂದಾಗಿಯೂ ತುರ್ತು ನಿರ್ಗಮನ ಸುರಂಗ ಮಾರ್ಗ ನಿರ್ಮಾಣ ಮಾಡದ ಕಾರಣದಿಂದಾಗಿಯೂ ಇಂಥದ್ದೊಂದು ತುರ್ತುಸ್ಥಿತಿ ಉದ್ಭವಿಸಿದೆ’ ಎನ್ನುತ್ತಾರೆ ಅವರು.

‘1.5 ಕಿ.ಮೀಕ್ಕಿಂತಲೂ ಉದ್ದ ಇರುವ ಸುರಂಗಗಳಲ್ಲಿ ತುರ್ತು ನಿರ್ಗಮನ ಸುರಂಗ ಮಾರ್ಗವನ್ನು ನಿರ್ಮಿಸಬೇಕು ಎಂದು ಸರ್ಕಾರ ಮಾರ್ಗಸೂಚಿ ನೀಡಿದೆ. ಆದರೆ, ಇಲ್ಲಿ ಈ ಮಾರ್ಗಸೂಚಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ಮೇಲುನೋಟಕ್ಕೆ ತೋರುತ್ತಿದೆ. ರಕ್ಷಣಾ ಕಾರ್ಯ ಮುಗಿದ ಕೂಡಲೇ ಕಾಮಗಾರಿಯಲ್ಲಿನ ಲೋಪಗಳ ಕುರಿತು ವಿಸ್ತೃತ ತನಿಖೆ ನಡೆಸಲಾಗುವುದು’ ಎಂದರು.

ತುರ್ತು ಮಾರ್ಗ ಯಾಕೆ ಬೇಕು: ಒಂದೊಮ್ಮೆ ಕಾಮಗಾರಿ ನಡೆಯುವ ವೇಳೆಯಲ್ಲಿ ಕಾರ್ಮಿಕರು ಸಿಲುಕಿಕೊಂಡರೆ, ಅವಘಡಗಳು ಸಂಭವಿಸಿದರೆ, ತುರ್ತು ನಿರ್ಗಮನ ಸುರಂಗ ಮಾರ್ಗದ ಮೂಲಕ ಜನರನ್ನು ರಕ್ಷಿಸಬಹುದು. ಕಾಮಗಾರಿ ಮುಗಿದ ಬಳಿಕವೂ, ಸಾರ್ವಜನಿಕರ ರಕ್ಷಣೆಗಾಗಿಯೂ ಇಂಥದ್ದೊಂದು ಮಾರ್ಗದ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT