ನವದೆಹಲಿ: ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ನಮ್ಮ ಜೊತೆಗಿದ್ದವು ಎಂದು ಕುಸ್ತಿ ಪಟು ವಿನೇಶ್ ಫೋಗಟ್ ಹೇಳಿದ್ದಾರೆ. ಬಜರಂಗ್ ಪೂನಿಯಾ ಜೊತೆ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಕಷ್ಟದ ಸಮಯದಲ್ಲಿ ನಿಮಗೆ ನಿಮ್ಮ ಜೊತೆ ಯಾರು ಇರುತ್ತಾರೆ ಎಂಬುದು ಅರಿವಾಗುತ್ತದೆ. ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ, ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ನಮ್ಮೊಂದಿಗೆ ನಿಂತಿದ್ದವು. ಅಂತಹ ಸಮಯದಲ್ಲಿ ನಮ್ಮ ಜೊತೆಗಿದ್ದ ಕಾಂಗ್ರೆಸ್ ಪಕ್ಷಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ಎಂದು ಅವರು ಹೇಳಿದ್ದಾರೆ.
‘ನಾವು ಬಹಳ ನೋವನ್ನು ಉಂಡಿದ್ದೇವೆ. ನೋವುಂಡ ಮಹಿಳಾ ಕುಸ್ತಿಪಟುಗಳ ಜೊತೆ ನಿಂತಿದ್ದೆವು’ಎಂದಿದ್ದಾರೆ.
#WATCH | Delhi | On joining Congress, Vinesh Phogat says, "I thank Congress party...Kehte hain na ki bure time mein pata lagta hai ki apna kaun hai...When we were being dragged on the road, all parties except BJP were with us. I feel proud that I have joined a party which stands… pic.twitter.com/FIV1FLQeXa
— ANI (@ANI) September 6, 2024
ಕಳೆದ ವರ್ಷ ಬಿಜೆಪಿಯ ಮಾಜಿ ಸಂಸದ ಮತ್ತು ಭಾರತ ಕುಸ್ತಿ ಫೇಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಖಂಡಿಸಿ ನಡೆದ ಹೋರಾಟದಲ್ಲಿ ವಿನೇಶ್ ಫೋಗಟ್ ಮತ್ತು ಬಜರಗ್ ಪೂನಿಯಾ ಮುಂಚೂಣಿಯಲ್ಲಿದ್ದರು.
‘ಪ್ರತಿಭಟನೆ ವೇಳೆ ಬಿಜೆಪಿಯ ಐಟಿ ಸೆಲ್ ನಮ್ಮ ವಿರುದ್ಧ ಅಪಪ್ರಚಾರ ಮಾಡಿತ್ತು. ಆಗಲೇ ನಾವು ಕುಸ್ತಿಯಿಂದ ದೂರ ಸರಿಯಬೇಕಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಆಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು. ನಾನು ಆಡಿದೆ. ಟ್ರಯಲ್ಸ್‌ನಲ್ಲಿ ಭಾಗವಹಿಸಲು ನನಗೆ ಇಚ್ಛೆ ಇಲ್ಲ ಎಂದು ಹೇಳಿದ್ದರು. ನಾನು ಭಾಗವಹಿಸಿದೆ. ನಾನು ಒಲಿಂಪಿಕ್ಸ್ ಹೋಗುವುದಿಲ್ಲ ಎಂದು ಹೇಳಿದ್ದರು. ನಾನು ಹೋಗಿ ಬಂದೆ’ಎಂದು ವಿನೇಶ್ ಹೇಳಿದ್ದಾರೆ.
‘ನನ್ನ ದೇಶದ ಜನರಿಗೆ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಇದು ಹೊಸ ಇನಿಂಗ್ಸ್. ನಾವು ಕ್ರೀಡಾ ವಕ್ತಾರರಾಗಿ ಕ್ರೀಡಾಪುಟಗಳ ಮೇಲಿನ ದೌರ್ಜನ್ಯವನ್ನು ಗಮನಿಸಿದ್ದೇವೆ. ಆ ಪರಿಸ್ಥಿತಿ ಯಾವೊಬ್ಬ ಕ್ರೀಡಾಪಟುವಿಗೂ ಬರುವುದು ಬೇಡ’ಎಂದಿದ್ದಾರೆ.
ವಿನೇಶ್, ಪೂನಿಯಾ ಇಬ್ಬರೂ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಕಾಂಗ್ರೆಸ್, ಕೇಂದ್ರೀಯ ಚುನಾವಣಾ ಸಮಿತಿ ಈ ಬಗ್ಗೆ ನಿರ್ಧರಿಸಲಿದೆ ಎಂದು ತಿಳಿಸಿದೆ.
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್ ಮತ್ತು ಎಎಪಿ ನಡುಗೆ ಗಂಭೀರ ಚರ್ಚೆ ನಡೆದಿದೆ.
90 ಕ್ಷೇತ್ರಗಳ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.