ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

AI Express Flight Cancellations | ಸಾವಿಗೂ ಮುನ್ನ ಪತಿ ಮುಖ ನೋಡಲಾಗದ ಮಹಿಳೆ

ಕಾಯ್ದಿರಿಸಿದ ವಿಮಾನ ಹಾರಾಟ ರದ್ದತಿಯಿಂದ ಸಮಸ್ಯೆ: ಸಂತ್ರಸ್ತೆ
Published 14 ಮೇ 2024, 23:36 IST
Last Updated 14 ಮೇ 2024, 23:36 IST
ಅಕ್ಷರ ಗಾತ್ರ

ತಿರುವನಂತಪುರ: ‘ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟವು ಕೊನೆಯ ಗಳಿಗೆಯಲ್ಲಿ ರದ್ದುಗೊಂಡಿದ್ದರಿಂದಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನ ಯೋಗಕ್ಷೇಮ ನೋಡಿಕೊಳ್ಳಲು ಹೋಗಲು ಸಾಧ್ಯವಾಗಿಲ್ಲ. ಜೊತೆಗೆ ಅವರು ಕೊನೆಯುಸಿರೆಳೆಯುವ ಮುನ್ನವೂ ಅವರ ಮುಖ ನೋಡಲಾಗಲಿಲ್ಲ’ ಎಂದು ಕೇರಳದ ಅಮೃತಾ ಎಂಬ ಮಹಿಳೆ ಕಣ್ಣೀರು ಹಾಕಿದರು. 

ಒಮನ್ ರಾಜಧಾನಿ ಮಸ್ಕತ್‌ನಲ್ಲಿರುವ ಅಮೃತಾ ಅವರ ಪತಿ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಯೋಗಕ್ಷೇಮ ನೋಡಿಕೊಳ್ಳಲು ಕೇರಳದಲ್ಲಿರುವ ಅಮೃತಾ ಅವರು ಮೇ 8ರಂದು ಒಮನ್‌ಗೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಅವರು ವಿಮಾನ ನಿಲ್ದಾಣಕ್ಕೆ ತೆರಳಿದಾಗ, ವಿಮಾನ ರದ್ದುಗೊಂಡಿದೆ ಎಂಬುದು ಅವರಿಗೆ ತಿಳಿಯಿತು. 

ಆಗ, ತಾವು ಮಸ್ಕತ್‌ಗೆ ಹೋಗಲೇಬೇಕು ಎಂದು ಪ್ರತಿಭಟಿಸಿದ್ದರಿಂದಾಗಿ, ಅವರಿಗೆ ಮಾರನೇ ದಿನದ ಮತ್ತೊಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಟಿಕೆಟ್ ಅನ್ನು ನೀಡಲಾಗಿತ್ತು. ದುರದೃಷ್ಟವಶಾತ್ ಆ ವಿಮಾನವೂ ರದ್ದುಗೊಂಡಿತ್ತು. ಇದರಿಂದಾಗಿ ಅವರು ಒಮನ್‌ಗೆ ತೆರಳಲಾಗಲಿಲ್ಲ. ಈ ನಡುವೆ, ಅವರ ಪತಿ ಮೃತಪಟ್ಟಿದ್ದಾರೆ ಎಂಬ ಸುದ್ದಿಯು ಸೋಮವಾರ ಅಮೃತಾ ಅವರ ಕುಟುಂಬವನ್ನು ತಲುಪಿದೆ. 

ಕೇರಳದಿಂದ ಹೊರಡಲು ಅವರ ಪತ್ನಿ ವಿಮಾನದ ಟಿಕೆಟ್ ಕಾಯ್ದಿರಿಸಿದ್ದರು. ಇನ್ನೇನು ಅವರು ಕಳೆದ ವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಸ್ಕತ್ ಸೇರಬೇಕಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಪತಿಯೂ ಕೊನೆಯುಸಿರೆಳೆದಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಅಮೃತಾ ಅವರ ತಾಯಿ, ‘ತನ್ನ ಪತಿಯು ಕೊನೆಯುಸಿರೆಳೆಯುವ ಮುನ್ನ ಮಗಳು, ಆಕೆಯ ಆತನ ಮುಖವನ್ನು ನೋಡಲಾಗದೆ ಇರುವುದು ನಿಜಕ್ಕೂ ಅನ್ಯಾಯ. ಒಮನ್‌ಗೆ ತೆರಳು ಯಾವುದಾದರೂ ವಿಮಾನದಲ್ಲಿ ಸೀಟು ಬಿಟ್ಟುಕೊಡುವಂತೆ ನಾವು ಪರಿಪರಿಯಾಗಿ ಬೇಡಿಕೊಂಡರೂ ಸಿಬ್ಬಂದಿ ತಲೆಕೆಡಿಸಿಕೊಳ್ಳಲೇ ಇಲ್ಲ’ ಎಂದು ಕಣ್ಣೀರು ಹಾಕಿದರು. 

ಟಾಟಾ ಸಮೂಹದ ಮಾಲೀಕತ್ವದ ಏರ್ ಎಕ್ಸ್‌ಪ್ರೆಸ್ ವಿಮಾನ ಸಂಸ್ಥೆಯಲ್ಲಿ ಅವ್ಯವಸ್ಥೆಯಿದೆ ಎಂದು ಆರೋಪಿಸಿ ವಿಮಾನದ ಹಲವು ಕ್ಯಾಬಿನ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಕ್ಯಾಬಿನ್ ಸಿಬ್ಬಂದಿ ಕೊರತೆಯಿಂದಾಗಿ ಮೇ 8ರಿಂದ 10ರ ಮಧ್ಯೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ 260ಕ್ಕೂ ವಿಮಾನಗಳು ಹಾರಾಟ ನಡೆಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT