ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಜಾನೆಗೆ ಮರಳಿದ ಸಂಶೋಧನಾ ಹಣ

ಕೇಂದ್ರ ಸರ್ಕಾರದ ಹೊಸ ವ್ಯವಸ್ಥೆ: ವಿಜ್ಞಾನಿಗಳಿಗೆ ತಪ್ಪದ ಕಿರಿಕಿರಿ
Published 15 ಆಗಸ್ಟ್ 2023, 19:59 IST
Last Updated 15 ಆಗಸ್ಟ್ 2023, 19:59 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಕಳೆದ ವರ್ಷದಿಂದ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಅಳವಡಿಸಿರುವ ಹೊಸ ಮಾನದಂಡದಿಂದ ದೇಶದ ವಿವಿಧ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನಿಗಳು ಸಂಶೋಧನೆ ನಡೆಸಲು ತೊಡಕಾಗಿದೆ.

ಅನುದಾನ ಬಿಡುಗಡೆಯ ಕಾರ್ಯವಿಧಾನದಲ್ಲಿನ ಲೋಪದಿಂದ ತೊಂದರೆಗೆ ಸಿಲುಕುವಂತಾಗಿದೆ. 

ಜೀವ ವಿಜ್ಞಾನ ವಿಭಾಗ, ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್‌, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ಗೆ ಅನುದಾನವು ಸಕಾಲದಲ್ಲಿ ಬಿಡುಗಡೆಯಾಗುತ್ತಿಲ್ಲ. ಸಾಕಷ್ಟು ಸಂಖ್ಯೆಯ ಸಂಶೋಧಕರಿಗೆ ಕಳೆದ ಸಾಲಿನ ಅನುದಾನ ಇನ್ನೂ ಲಭಿಸಿಲ್ಲ. 

ಮಾರ್ಚ್‌ ಅಂತ್ಯಕ್ಕೆ ಕೆಲವೇ ದಿನಗಳಿದ್ದಾಗ ಸಂಶೋಧಕರಿಗೆ ನಿಗದಿತ ಅನುದಾನ ಬಿಡುಗಡೆಯಾಗಿತ್ತು. ಹಾಗಾಗಿ, ಬಹಳಷ್ಟು ಸಂಶೋಧಕರು ಈ ಹಣವನ್ನು ಬಳಕೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ, ಮಾರ್ಚ್‌ 31ರಂದು ಸರ್ಕಾರದ ಖಜಾನೆಗೆ ಹಣ ವಾಪಸ್‌ ಹೋಗಿದೆ. ಇದನ್ನು ಬಳಕೆಯಾಗದ ಠೇವಣಿಯೆಂದು ಸರ್ಕಾರ ಪರಿಗಣಿಸಿದೆ. 

‘2022ರ ಏಪ್ರಿಲ್‌ನಲ್ಲಿ ಸರ್ಕಾರವು ಈ ಹೊಸ ಪದ್ಧತಿಯನ್ನು ಪರಿಚಯಿಸಿತು. ಆಗಸ್ಟ್‌ ಮಧ್ಯದವರೆಗೂ ಇದರ ಬಗ್ಗೆ ನಮಗೆ ಯಾವುದೇ ಕಲ್ಪನೆ ಇರಲಿಲ್ಲ. ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ (ಪಿಎಫ್‌ಎಂಎಸ್‌) ಖಾತೆಗಳನ್ನು ವಿಶ್ವವಿದ್ಯಾಲಯವು ನಿರ್ವಹಿಸುತ್ತದೆ. ಎಲ್ಲಾ ಸಂಶೋಧನೆಗಳಿಗೂ ಈ ಖಾತೆ ಮೂಲಕವೇ ಹಣ ‍‍ಪಾವತಿಯಾಗುತ್ತದೆ. ಸದ್ಯ ಈ ನಿಧಿ ಬಳಕೆಗೆ ನಿರ್ಬಂಧ ಹೇರಿ ಮೊಹರು ಹಾಕಲಾಗಿದೆ. ಈಗ ನಮಗೆ ಸರ್ಕಾರದ ಹೊಸ ವ್ಯವಸ್ಥೆಯ ನಿಜವಾದ ಸ್ವರೂಪ ಅರ್ಥವಾಗಿದೆ’ ಎಂದು ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್‌.ಸಿ. ಲಖೋಟಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅನುದಾನ ವಾಪಸ್‌ ಹೋದ ಬಗ್ಗೆ ಇ–ಮೇಲ್‌ ಮತ್ತು ದೂರವಾಣಿ ಮೂಲಕ ಸಾಕಷ್ಟು ಬಾರಿ ಮನವಿ ಮಾಡಿದ ಬಳಿಕ ಈ ಹಣವು ವಿಜ್ಞಾನಿಗಳ ಬಳಕೆಗೆ ಲಭ್ಯವಾಗಿತ್ತು.

‘2023ರ ಮಾರ್ಚ್‌ 31ರೊಳಗೆ ಸಂಶೋಧನೆಗಳಿಗೆ ನಿಗದಿಪಡಿಸಿದ ನಿಧಿಯನ್ನು ಬಳಸಿರಬೇಕು.   ಏಪ್ರಿಲ್‌ 1ರಿಂದ ಅದು ಬಳಕೆಗೆ ಸಿಗುವುದಿಲ್ಲ. ಹಿಂದಿನ ವರ್ಷ ಖಜಾನೆಗೆ ಮರಳಿದ್ದ ಅನುದಾನವು ಈ ವರ್ಷದ ಜೂನ್‌ನಲ್ಲಿ ಲಭಿಸಿದೆ. ಇದಕ್ಕೂ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಸಂವಹನ ನಡೆಸಬೇಕಾಯಿತು’ ಎಂದು ತಿಳಿಸಿದರು.

‘ಸಂಶೋಧನೆಗೆ ಮೀಸಲಿಟ್ಟ ಅನುದಾನದ ಬಿಡುಗಡೆ ಸಂಬಂಧ ಎದುರಾಗಿರುವ ತಾಂತ್ರಿಕ ಸಮಸ್ಯೆಯ ಬಗ್ಗೆ ಇಲಾಖೆಗೂ ಅರಿವಿದೆ. ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಕೆಲವು ಬದಲಾವಣೆಯಾಗಬೇಕಿದೆ. ಆದರೆ, ಇಡೀ ದೇಶಕ್ಕೆ ಈ ಆರ್ಥಿಕ ಮಾದರಿಯನ್ನು ಅಳವಡಿಸಲಾಗಿದೆ. ಶೀಘ್ರವೇ, ಈ ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು’ ಎಂದು ಕೇಂದ್ರ ವಿಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT