ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಸ್ಪರ ಬೆನ್ನು ತಟ್ಟಿದ ಮೋದಿ–ಪಟ್ನಾಯಕ್‌

ಬಿಜೆಪಿ–ಬಿಜೆಡಿ ನಡುವೆ ಚುನಾವಣೋತ್ತರ ಮೈತ್ರಿಯ ವದಂತಿ
Last Updated 15 ಮೇ 2019, 20:30 IST
ಅಕ್ಷರ ಗಾತ್ರ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಮತ್ತು ಒಡಿಶಾ ಮುಖ್ಯಮಂತ್ರಿ, ಬಿಜೆಡಿ ಮುಖ್ಯಸ್ಥ ನವೀನ್‌ ಪಟ್ನಾಯಕ್‌ ಅವರು ಫೋನಿ ಚಂಡಮಾರುತಕ್ಕೆ ಮೊದಲು ಮತ್ತು ನಂತರ ಪರಸ್ಪರರನ್ನು ಹೊಗಳಿದ್ದಾರೆ. ಪುನರ್ವಸತಿ ಯೋಜನೆಗಳ ಬಗ್ಗೆಯೂ ಈ ಹೊಗಳಿಕೆ ಮುಂದುವರಿದಿದೆ. ಆದರೆ, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ಮತ್ತು ಬಿಜೆಡಿ ನಡುವೆ ಹೊಂದಾಣಿಕೆ ಸಾಧ್ಯತೆ ಇದೆ ಎಂಬ ವದಂತಿ ಹರಿದಾಡುತ್ತಿದೆ.

ಲೋಕಸಭೆ ಮತ್ತು ಒಡಿಶಾ ವಿಧಾನಸಭೆಯ ಮತದಾನ ಕಳೆದ ತಿಂಗಳೇ ಪೂರ್ಣಗೊಂಡಿದೆ. ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ ಮೋದಿ ಮತ್ತು ಪಟ್ನಾಯಕ್‌ ಮಾತ್ರವಲ್ಲ ಅವರವರ ಪಕ್ಷದ ಮುಖಂಡರು ಕೂಡ ಪರಸ್ಪರರನ್ನು ಕಟುವಾಗಿ ಟೀಕಿಸಿದ್ದರು. ಈ ಎರಡು ಪಕ್ಷಗಳು ಜತೆಗೂಡುವುದು ಸಾಧ್ಯವೇ ಇಲ್ಲ ಎಂದು ಜನರು ಭಾವಿಸುವಂತೆ ಅವರ ವರ್ತನೆ ಇತ್ತು. ಆದರೆ, ಈಗ, ಈ ಇಬ್ಬರು ಪರಸ್ಪರರನ್ನು ಹೊಗಳುತ್ತಿರುವುದು ಭಾರಿ ಆಶ್ಚರ್ಯವನ್ನೂ ಹುಟ್ಟಿಸಿದೆ.

ಪರಸ್ಪರ ಹೊಗಳಿಕೆ ಪ್ರಕ್ರಿಯೆಗೆ ಚಾಲನೆ ಕೊಟ್ಟವರು ಪ್ರಧಾನಿ ಮೋದಿ. ಫೋನಿ ಚಂಡಮಾರುತದ ಪರಿಣಾಮಗಳನ್ನು ನಿಭಾಯಿಸಲು ಪಟ್ನಾಯಕ್‌ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ನಾಯಕ್‌ ಅವರು ಅದ್ಭುತ ಕೆಲಸ ಮಾಡಿದ್ದಾರೆ ಎಂದು ಚಂಡಮಾರುತ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಸಂದರ್ಭದಲ್ಲಿ ಹೇಳಿದರು. ಮೇ 3ರಂದು ಫೋನಿ ಚಂಡಮಾರುತವು ಪುರಿಯನ್ನು ಅಪ್ಪಳಿಸಿತ್ತು. ಅದಾದ ಎರಡು ದಿನಗಳ ಬಳಿಕ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದರು.

ಫೋನಿ ಚಂಡಮಾರುತವು ಭೂ ಪ್ರದೇಶಕ್ಕೆ ಅಪ್ಪಳಿಸುವ ಮೊದಲೇ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ರಾಜ್ಯ ಸರ್ಕಾರದ ಕೆಲಸವನ್ನು ಮೋದಿ ಹೊಗಳಿದ್ದರು. ರಾಜ್ಯ ಸರ್ಕಾರದ ಕ್ರಮದಿಂದಾಗಿ ಸಾವಿರಾರು ಜನರ ಜೀವ ಉಳಿದಿತ್ತು.

ಚಂಡಮಾರುತದ ಪರಿಣಾಮಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಕೊಟ್ಟ ನೆರವನ್ನು ಉಲ್ಲೇಖಿಸಿ ಪಟ್ನಾಯಕ್‌ ಅವರು ಮೋದಿಯನ್ನು ಹೊಗಳಿದರು. ಪ್ರಧಾನ ಮಂತ್ರಿ ಆವಾಜ್‌ ಯೋಜನೆ ಅಡಿಯಲ್ಲಿ ಐದು ಲಕ್ಷ ಮನೆಗಳನ್ನು ಮಂಜೂರು ಮಾಡಬೇಕು ಎಂದು ಕೋರಿ ಪಟ್ನಾಯಕ್‌ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ‘ಅತ್ಯಂತ ತೀವ್ರವಾದ ಫೋನಿ ಚಂಡಮಾರುತದ ಪರಿಣಾಮಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಕೊಟ್ಟ ಬೆಂಬಲಕ್ಕೆ ಕೃತಜ್ಞತೆ’ ಎಂದು ಪಟ್ನಾಯಕ್‌ಪತ್ರದಲ್ಲಿ ಹೇಳಿದ್ದರು.

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಶ್ಲಾಘಿಸುವ ಹೇಳಿಕೆಯನ್ನು ಒಡಿಶಾ ಮುಖ್ಯಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿತ್ತು. ಚಂಡಮಾರುತ ಪೀಡಿತ ಪ್ರದೇಶಗಳ ಜನರಿಗೆ ಹಂಚುವುದಕ್ಕಾಗಿ 1,000 ಕಿಲೋ ಲೀಟರ್‌ ಸೀಮೆ ಎಣ್ಣೆ ಮಂಜೂರು ಮಾಡಿದ್ದಕ್ಕಾಗಿ ಈ ಹೇಳಿಕೆ ಕೊಡಲಾಗಿತ್ತು.

ಇಂತಹ ಅಂಶಗಳನ್ನು ಬಳಸಿಕೊಂಡ ಕಾಂಗ್ರೆಸ್‌ ಪಕ್ಷವು ಬಿಜೆಪಿ ಮತ್ತು ಬಿಜೆಡಿ ಪಕ್ಷವನ್ನು ಟೀಕಿಸಿದೆ. ‘ಎಲ್ಲ ವಿಚಾರಗಳಲ್ಲಿಯೂ ಎರಡೂ ಪಕ್ಷಗಳು ಶಾಮೀಲಾಗಿವೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಎರಡೂ ಪಕ್ಷಗಳು ಬೈದಾಡಿಕೊಂಡದ್ದು ನಾಟಕ ಮಾತ್ರ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಬಿಜೆಡಿ ಮತ್ತು ಬಿಜೆಪಿ ನಡುವೆ 1997ರಿಂದ 2009ರವರೆಗೆ ಮೈತ್ರಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT