ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ 6 ತಿಂಗಳಲ್ಲಿ 1,695 ಮಹಿಳೆಯರ ನಾಪತ್ತೆ: ಬೆಂಗಳೂರಲ್ಲೇ ಹೆಚ್ಚು

ಮೂರೂವರೆ ವರ್ಷಗಳಲ್ಲಿ ಈ ವರ್ಷವೇ ಅಧಿಕ ಪ್ರಕರಣ
Published 6 ಆಗಸ್ಟ್ 2024, 5:28 IST
Last Updated 6 ಆಗಸ್ಟ್ 2024, 5:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 7,550 ಮಹಿಳೆಯರು ನಾಪತ್ತೆಯಾಗಿದ್ದಾರೆ. ಅವರಲ್ಲಿ 5,855 ಮಹಿಳೆಯರನ್ನು ಪೊಲೀಸರು ಪತ್ತೆ ಮಾಡಿದ್ದು, ಇನ್ನೂ 1,695 ಮಹಿಳೆಯರ ಬಗ್ಗೆ ಸುಳಿವು ಸಿಕ್ಕಿಲ್ಲ. ಕಳೆದ ಮೂರು ವರ್ಷಗಳಲ್ಲಿ ಈ ವರ್ಷವೇ ಅತೀ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲೇ ಅತೀ ಹೆಚ್ಚು (429) ಪ್ರಕರಣ ದಾಖಲಾಗಿವೆ. ಮೈಸೂರು (109), ಬೆಳಗಾವಿ (87), ಶಿವಮೊಗ್ಗ (84), ತುಮಕೂರು (75), ವಿಜಯಪುರ (59), ರಾಮನಗರ (51), ಚಿತ್ರದುರ್ಗ (48), ಕೋಲಾರ (47), ದಾವಣಗೆರೆ (42) ಜಿಲ್ಲೆಗಳಲ್ಲಿ ಹೆಚ್ಚು ಮಹಿಳೆಯರು ನಾಪತ್ತೆ ಆಗಿದ್ದಾರೆ.

ಕಳೆದ ಮೂರೂವರೆ ವರ್ಷಗಳಲ್ಲಿ 42,237 ಮಹಿಳೆಯರ ನಾಪತ್ತೆ ಪ್ರಕರಣ ದಾಖಲಾಗಿವೆ. ಈ ಪೈಕಿ 39,389 ಮಹಿಳೆಯರನ್ನು ಪತ್ತೆ ಮಾಡಲಾಗಿದ್ದು, ಉಳಿದ 2,848 ಮಹಿಳೆಯರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಪ್ರೇಮ ಪ್ರಕರಣ, ಕೌಟುಂಬಿಕ ಕಲಹ, ಮನಸ್ತಾಪ, ಆರ್ಥಿಕ ಸ್ಥಿತಿ, ಸಾಮಾಜಿಕ ಜಾಲತಾಣದಲ್ಲಿ ಪರಿಚಿತರ ಪ್ರಭಾವ,  ಅಪಹರಣ, ಕಳ್ಳಸಾಗಣೆ ಮತ್ತಿತರ ಕಾರಣದಿಂದ ಮಹಿಳೆಯರು ನಾಪತ್ತೆ ಆಗುತ್ತಿದ್ದಾರೆ ಎಂಬುದು ಪೊಲೀಸರ ಹೇಳಿಕೆ.

‘ಮಾನವ ಕಳ್ಳಸಾಗಣೆ ದಂಧೆ ಅವ್ಯಾಹತವಾಗಿ ನಡೆದಿದ್ದು, ಅಂತಹ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳಾ ಸುರಕ್ಷತೆಯ ಬಗ್ಗೆ ಸ್ವಯಂ–ಸೇವಾ ಸಂಸ್ಥೆ, ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಪೊಲೀಸ್ ಇಲಾಖೆಯು ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರ ನಾಪತ್ತೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಯತ್ನ ಮುಂದುವರೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಪತ್ತೆಯಾದ ಮಹಿಳೆಯರ ಪತ್ತೆಗೆ ಆಯಾ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಮಹಿಳೆಯರ ಅಪಹರಣ, ಕಳ್ಳಸಾಗಣೆ ದಂಧೆಕೋರರ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿ.ಪರಮೇಶ್ವರ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT