ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ ಬೋಧನೆಗೆ ವ್ಯವಸ್ಥೆ: ವಯೋಮಿತಿ ಮೀರಿದವರಿಗೆ ಪ್ರತ್ಯೇಕ ತರಗತಿ

ಪ್ರಸಕ್ತ ವರ್ಷ ರಾಜ್ಯದ 250 ಶಾಲೆಗಳಲ್ಲಿ ವಿಶೇಷ ಬೋಧನೆಗೆ ವ್ಯವಸ್ಥೆ
Published 6 ಜೂನ್ 2024, 0:08 IST
Last Updated 6 ಜೂನ್ 2024, 0:08 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಯಿಂದ ಹೊರಗುಳಿದ 16 ವರ್ಷಗಳ ವಯೋಮಿತಿ ದಾಟಿದ ಮಕ್ಕಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸಲು ರಾಜ್ಯದ ವಿವಿಧೆಡೆ 250 ಶಾಲೆಗಳನ್ನು ಗುರುತಿಸಲಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸ್ಥಳೀಯ ಸಂಸ್ಥೆಗಳ ನೆರವಿನಿಂದ ಮನೆಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಗಳ ಸಹಯೋಗದಲ್ಲಿ 2023–24ನೇ ಶೈಕ್ಷಣಿಕ ಸಾಲಿನಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ ಶಾಲೆ ತೊರೆದ ಗ್ರಾಮೀಣ ಪ್ರದೇಶದ 46 ಸಾವಿರ ಮಕ್ಕಳು ಸೇರಿದಂತೆ ಒಟ್ಟು 74 ಸಾವಿರ ಮಕ್ಕಳನ್ನು ಪತ್ತೆ ಮಾಡಲಾಗಿತ್ತು.

ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಬಹುತೇಕರು ಮೂರು, ನಾಲ್ಕು, ಐದು, ಎಂಟನೇ ತರಗತಿ ಪೂರೈಸಿದ್ದಾರೆ. 16 ವರ್ಷದ ಒಳಗೆ ಇರುವವರನ್ನು ಅವರ ವಯೋಮಿತಿಗೆ ಅನುಗುಣವಾಗಿ ಆಯಾ ತರಗತಿಗಳಿಗೆ ಸಮೀಪದ ಶಾಲೆಗಳಿಗೆ ದಾಖಲು ಮಾಡಲಾಗಿದೆ. ಅವರಲ್ಲಿ 16 ವರ್ಷಗಳ ಮಿತಿ ದಾಟಿದವರಿಗೆ ಯಾವ ತರಗತಿಗೆ ಸೇರಿಸಬೇಕು ಎಂಬ ಗೊಂದಲ ಮುಂದುವರಿದಿತ್ತು. ಕೊನೆಗೆ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರೀಯ ಮುಕ್ತ ಶಾಲೆಯಲ್ಲಿ (ಎನ್‌ಐಒಎಸ್‌) 10ನೇ ತರಗತಿಗೆ ನೋಂದಣಿ ಮಾಡಿಸಿ, ಪರೀಕ್ಷೆ ಬರೆಸಲಾಗಿತ್ತು. ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಗ್ರಂಥಾಲಯಗಳಲ್ಲಿ ಅವರು ಓದಲು ಅಗತ್ಯವಾದ ಪುಸ್ತಕ, ಸೌಕರ್ಯ ಒದಗಿಸಲಾಗಿತ್ತು.

16 ವರ್ಷ ವಯೋಮಿತಿ ಮೀರಿದ 1,330 ಮಕ್ಕಳನ್ನು ಕಳೆದ ವರ್ಷ ರಾಷ್ಟ್ರೀಯ ಮುಕ್ತ ಶಾಲೆಗೆ ನೋಂದಣಿ ಮಾಡಿಸಿ, ಪರೀಕ್ಷೆ ಬರೆಸಲಾಗಿತ್ತು. ಆದರೆ, ಶೇ 80ರಷ್ಟು ಮಕ್ಕಳು ತೇರ್ಗಡೆಯಾಗಿಲ್ಲ. ಅನುತ್ತೀರ್ಣರಾದವರು ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳದ ಕಾರಣ ಅರ್ಧಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಮೂಲಕ ವಯೋಮಿತಿ ಮೀರಿದ ಮಕ್ಕಳಿಗೆ 10ನೇ ತರಗತಿ ಉತ್ತೀರ್ಣರಾಗಲು ಅನುಕೂಲವಾಗುವಂತೆ ತರಗತಿಗಳನ್ನು ನಡೆಸಲು ರಾಜ್ಯದ 250 ಶಾಲೆಗಳಲ್ಲಿ ವ್ಯವಸ್ಥೆ ಮಾಡಿದೆ.  

ಮುಕ್ತ ಶಾಲೆಗೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ಇಂತಹ ಶಾಲೆಗಳಲ್ಲಿ ತರಗತಿಗಳಿಗೆ ಹಾಜರಾಗಬಹುದು. ಸ್ಥಳೀಯ ಸಂಸ್ಥೆಗಳ ಗ್ರಂಥಾಲಯಗಳ ಮೂಲಕ ಅಗತ್ಯ ಪಠ್ಯಪುಸ್ತಕ, ಕಲಿಕಾ ಸಾಮಗ್ರಿ ಪಡೆದುಕೊಳ್ಳಬಹುದು.

16 ವರ್ಷ ವಯೋಮಿತಿ ದಾಟಿದ, ಶಾಲೆ ತೊರೆದ ಮಕ್ಕಳು ಶಿಕ್ಷಣ ಪೂರೈಸಲು ಅಗತ್ಯವಾದ ಕಲಿಕಾ ಬೋಧನೆಗೆ ವ್ಯವಸ್ಥೆ ಮಾಡಲಾಗಿದೆ
ಕೆ.ಎನ್‌. ರಮೇಶ್‌, ಯೋಜನಾ ನಿರ್ದೇಶಕ, ಸಮಗ್ರ ಶಿಕ್ಷಣ ಕರ್ನಾಟಕ
ವಸತಿಸಹಿತ ವಿಶೇಷ ತರಬೇತಿ
ಶಾಲೆ ತೊರೆದ ಮಕ್ಕಳನ್ನು ವಯೋಮಿತಿಗೆ ಅನುಗುಣವಾಗಿ ಆಯಾ ತರಗತಿಗಳಿಗೆ ದಾಖಲು ಮಾಡುವ ಮೊದಲು ಹಿಂದಿನ ತರಗತಿಗಳ ಕುರಿತು ಸೇತುಬಂಧ ಶಿಕ್ಷಣ ನೀಡಲು ವಿಶೇಷ ತರಗತಿಗಳನ್ನು ಸಮಗ್ರ ಶಿಕ್ಷಣ ಕರ್ನಾಟಕ ಒದಗಿಸುತ್ತಿದೆ. ಮೂರರಿಂದ ಒಂದು ವರ್ಷದವರೆಗೆ ವಿಶೇಷ ಕಲಿಕಾ ತರಬೇತಿ ನೀಡಿದ ನಂತರ ಅವರನ್ನು ಮುಂದಿನ ತರಗತಿಗಳಿಗೆ ದಾಖಲು ಮಾಡಲಾಗುತ್ತಿದೆ. ವಲಸಿಗರು, ಅಲೆಮಾರಿಗಳು ಸೇರಿದಂತೆ ವಸತಿ ಅಗತ್ಯವಿರುವ ಮಕ್ಕಳಿಗೆ ದಕ್ಷಿಣ ಕನ್ನಡ, ಚಾಮರಾಜನಗರ, ಹಾವೇರಿ ಜಿಲ್ಲೆಗಳಲ್ಲಿ ವಸತಿಯುತ ತರಬೇತಿಗೂ ವ್ಯವಸ್ಥೆ ಮಾಡಲಾಗಿದೆ. 2023–24ನೇ ಶೈಕ್ಷಣಿಕ ಸಾಲಿನಲ್ಲಿ 527 ಮಕ್ಕಳು ವಸತಿಸಹಿತ ಕಲಿಕಾ ತರಬೇತಿಯ ಸೌಲಭ್ಯ ಪಡೆದಿದ್ದಾರೆ. ಈ ಸೌಲಭ್ಯವನ್ನು ಅಗತ್ಯವಿರುವ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT