ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಡಿತರ ಚೀಟಿಗೆ 2.95 ಲಕ್ಷ ಅರ್ಜಿ, ಶೀಘ್ರ ವಿತರಣೆ: ಸಚಿವ ಕೆ.ಎಚ್‌. ಮುನಿಯಪ್ಪ

Published 3 ನವೆಂಬರ್ 2023, 7:11 IST
Last Updated 3 ನವೆಂಬರ್ 2023, 7:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹೊಸ ಪಡಿತರ ಚೀಟಿ ಕೋರಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ, ಶೀಘ್ರದಲ್ಲಿ ವಿತರಿಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ ಬಿಜೆಪಿ ಸರ್ಕಾರ ಹೊಸ ಪಡಿತರ ಚೀಟಿ ವಿತರಣೆಯನ್ನು ನಿಲ್ಲಿಸಿತ್ತು. ಅದನ್ನು ಪುನರಾರಂಭಿಸುತ್ತಿದ್ದೇವೆ. ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವ ಬಹುತೇಕ ಬಿಪಿಎಲ್‌ ಕಾರ್ಡ್‌ ಕೋರಿದ್ದಾರೆ. ಇವರನ್ನು ಪರಿಶೀಲಿಸಿ, ದಾಖಲಾತಿಗಳ ಆಧಾರದ ಮೇಲೆ ಬಿಪಿಎಲ್‌, ಎಪಿಎಲ್‌ ಬೇರ್ಪಡಿಸಿ, ಕಾರ್ಡ್‌ ವಿತರಿಸಲಾಗುವುದು’ ಎಂದರು.

‘ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿದ್ದರೆ ಅಂತಹವರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇವು ಪತ್ತೆಯಾದರೆ ಅವುಗಳನ್ನು ರದ್ದುಪಡಿಸಲಾಗುವುದು. ಇದರ ಜೊತೆಗೆ, ಪಡಿತರ ಅಕ್ಕಿ ದುರುಪಯೋಗವಾದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಇಂತಹ ದೂರುಗಳು ಬಂದ ಕಡೆ ತನಿಖೆ ಮಾಡಿಸುತ್ತೇವೆ’ ಎಂದು ಹೇಳಿದರು.

ಅಕ್ಕಿ ವಿಷಯದಲ್ಲಿ ರಾಜಕೀಯ:

ಆಹಾರ ಭದ್ರತೆ ಕಾಯ್ದೆಯನ್ನು 2013ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಅದನ್ನು ಈಗಿನ ಬಿಜೆಪಿ ಸರ್ಕಾರ ಮುಂದುವರಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು 10 ಕೆ.ಜಿ. ಅಕ್ಕಿ ಕೊಡಲು ಹೆಚ್ಚುವರಿ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿದರೆ ಅವರು ಕೊಡಲಿಲ್ಲ. ಬಡವರಿಗೆ ನೀಡುವ ಅಕ್ಕಿ ವಿಷಯದಲ್ಲಿ ಅವರು ರಾಜಕೀಯ ಬೆರೆಸಬಾರದಿತ್ತು ಎಂದು ಟೀಕಿಸಿದರು.

ಅಕ್ಕಿ ಕೊಡುವಂತೆ ನಾವು ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರವು ಸ್ಪಂದಿಸುತ್ತಿಲ್ಲ. ಹೀಗಾಗಿ ಅಕ್ಕಿ ಬೆಳೆಯುವ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಢ ರಾಜ್ಯಗಳಿಂದ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಅಕ್ಕಿ ಸಿಕ್ಕ ತಕ್ಷಣ ಹಣ ಕೊಡುವುದನ್ನು ನಿಲ್ಲಿಸಿ, ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.

10 ಕೆ.ಜಿ ಅಕ್ಕಿಯ ಕಮಿಷನ್‌ ತಮಗೆ ನೀಡಬೇಕೆನ್ನುವ ಪಡಿತರ ವಿತರಕರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪಡಿತರ ವಿತರಕರಿಗೆ ಈಗಾಗಲೇ 5 ಕೆ.ಜಿ. ಅಕ್ಕಿಯ ಕಮಿಷನ್‌ ಸಿಗುತ್ತಿದೆ. ಇನ್ನುಳಿದ 5 ಕೆ.ಜಿ ಅಕ್ಕಿಯ ಬದಲಾಗಿ ಹಣವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೀಡುತ್ತಿದ್ದೇವೆ. ವಿತರಕರ ಬೇಡಿಕೆ ಬಗ್ಗೆ ಯೋಚಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT