ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ಹುದ್ದೆಗೆ ₹5 ಕೋಟಿ: ಇ.ಡಿ ಮಧ್ಯಪ್ರವೇಶಿಸಲಿ -ಡಿ.ಕೆ. ಶಿವಕುಮಾರ್‌

Last Updated 21 ಡಿಸೆಂಬರ್ 2022, 21:11 IST
ಅಕ್ಷರ ಗಾತ್ರ

ಬೆಳಗಾವಿ: ‘ಕುಲಪತಿ ಹುದ್ದೆಗೆ ₹ 5 ಕೋಟಿಗೆ ಮಾರಾಟ ಆಗುತ್ತಿದೆ ಎಂಬ ಬಿಜೆಪಿ ಸಂಸದ ಪ್ರತಾಪಸಿಂಹ ಹೇಳಿಕೆ ವಿಚಾರದಲ್ಲಿ ಲೋಕಾಯುಕ್ತ, ಇ.ಡಿ ತಕ್ಷಣ ಮಧ್ಯಪ್ರವೇಶಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಹಣ ಸರ್ಕಾರದಲ್ಲಿ ಯಾರಿಗೆ ತಲುಪಿದೆ? ಮಂತ್ರಿಗಳಿಗೆ ತಲುಪಿದೆಯೋ? ಅಧಿಕಾರಿಗಳಿಗೆ ತಲುಪಿದೆಯೋ? ಎಂಬುದು ಚರ್ಚೆ ಆಗಬೇಕು‘ ಎಂದರು.

‘ವಿಧಾನಪರಿಷತ್‌ನಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದೆ. ನಮ್ಮ ಮೇಲೆ ದಾಳಿ ಮಾಡಿ ತನಿಖೆ ಮಾಡುವವರು ಅವರ ಹೇಳಿಕೆ ವಿಚಾರದಲ್ಲೂ ತನಿಖೆ ಮಾಡಬೇಕು. ಸಿಬಿಐನವರು ನನ್ನ ಜತೆ ವ್ಯವಹಾರ ಇಟ್ಟುಕೊಂಡವರಿಗೆಲ್ಲ ನೊಟೀಸ್ ನೀಡಿ ವಿಚಾರಣೆ ಮಾಡಿದ್ದಾರೆ. ಹೀಗಾಗಿ, ಈ ವಿಚಾರದಲ್ಲಿ ಚರ್ಚೆ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ’ ಎಂದರು.

‘ಇ.ಡಿ, ಐಟಿ, ಸಿಬಿಐ, ಲೋಕಾಯುಕ್ತ ಸಂಸ್ಥೆಗಳು ಏನು ಮಾಡುತ್ತಿವೆ. ಈ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ಅವರ ಕಚೇರಿ ಮೇಲೆ ಆರೋಪ ಮಾಡಲು ಆಗುವುದಿಲ್ಲ. ಅದು ಸರಿಯಲ್ಲ. ಕುಲಪತಿಗಳ ಹೆಸರನ್ನು ಸರ್ಕಾರ ಶಿಫಾರಸು ಮಾಡಿದರೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಶಿಕ್ಷಣ ವ್ಯವಸ್ಥೆಯ ಹುದ್ದೆ ಮಾರಾಟ ಭ್ರಷ್ಟಾಚಾರದ ವಿಚಾರವಾಗಿದ್ದು, ಬಿಜೆಪಿ ಸಂಸದರು ಹೇಳಿರುವ ವಿಚಾರವನ್ನು ನಾವು ಚರ್ಚೆ ಮಾಡದಿದ್ದರೆ ನಮ್ಮ ಕರ್ತವ್ಯದಲ್ಲಿ ಲೋಪ ಆಗಲಿದೆ. ಈ ಬಗ್ಗೆ ತನಿಖೆ ಆಗಬೇಕು, ಜನರಿಗೆ ವಿಚಾರ ತಿಳಿಯಬೇಕು’ ಎಂದರು.

ಪ್ರತಾಪ್ ಬಳಿ ದಾಖಲೆ ಇದ್ದರೆ ಕೊಡಲಿ: ಅಶ್ವತ್ಥನಾರಾಯಣ

ಬೆಳಗಾವಿ:‘ಸಂಸದ ಪ್ರತಾಪ ಸಿಂಹ ಆಡಿರುವ ಮಾತಿನ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು, ಅವರ ಬಳಿ ಆರೋಪಕ್ಕೆ ಸಂಬಂಧಿಸಿದ ದಾಖಲೆ ಏನಾದರೂ ಅವರ ಬಳಿ ಇದ್ದರೆ ಕೊಡಲಿ’ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ವಿಸ್ತೃತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. ಯಾವುದೇ ಚುನಾಯಿತ ಪ್ರತಿನಿಧಿ ತಮ್ಮ ಅಭಿಪ್ರಾಯ ಮಂಡಿಸಿದರೆ ತಪ್ಪೇನು? ಪ್ರತಾಪ ಸಿಂಹ ಮಾತುಗಳಿಂದ ಸರ್ಕಾರಕ್ಕೆ ಮುಜುಗರ ಆಗುವಂತಹದ್ದೇನಿಲ್ಲ’ ಎಂದರು.

ನಮ್ಮ ಸರ್ಕಾರದ ಬಂದ ಮೇಲೆ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಅಂತಹ ಭ್ರಷ್ಟಾಚಾರ ನಡೆದಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT