ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಮತದಾರರ ಪಟ್ಟಿ ಪ್ರಕಟ: ರಾಜ್ಯದಲ್ಲೀಗ ಒಟ್ಟು 5.38 ಕೋಟಿ ಮತದಾರರು

Published 22 ಜನವರಿ 2024, 12:58 IST
Last Updated 22 ಜನವರಿ 2024, 12:58 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ-2024 ಇಂದು ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,37,85,815 ಆಗಿದ್ದು, ಇದರಲ್ಲಿ 2,69,33,750 ಪುರುಷ ಮತದಾರರು, 2,68,47,145 ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರು ಇದ್ದಾರೆ.

‘ಮಹಿಳಾ ಮತದಾರರಿಗೂ ಹಾಗೂ ಪುರುಷ ಮತದಾರರಿಗೂ ಸ್ವಲ್ಪ ಮಾತ್ರ ವ್ಯತ್ಯಾಸವಿರುವುದು ಸಂತಸದ ವಿಷಯವಾಗಿದೆ. ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದಾರೆ’ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದರು.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿವತಿಯಿಂದ ಪ್ರಕಟಿಸಲಾದ ರಾಜ್ಯದ ಅಂತಿಮ ಮತದಾರರ ಪಟ್ಟಿ – 2024 ರ ಕುರಿತು ಇಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರಡು ಮತದಾರರ ಪಟ್ಟಿ ಪ್ರಕಾರ 5.33 ಕೋಟಿ ಮತದಾರರಿದ್ದರು. ಇದೀಗ 4.08 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಿಳಾ ಮತದಾರರದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದ್ದು, 2.77 ಲಕ್ಷ ಮತದಾರರು ಅಧಿಕವಾಗಿದ್ದಾರೆ. ಪುರುಷ ಮತದಾರರಲ್ಲಿ 1.30 ಮತ್ತು ಇತರೆ ಮತದಾರರಲ್ಲಿ 24 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. 100 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರ ಸಂಖ್ಯೆ 17,937 ಆಗಿದೆ. ಆದರೆ ಕರಡು ಮತದಾರರ ಪಟ್ಟಿಯಲ್ಲಿ 100 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರ ಸಂಖ್ಯೆಯು 23,377 ಇತ್ತು. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು, ಕರಡುಪಟ್ಟಿಯಲ್ಲಿ 13.82 ಲಕ್ಷ ಮತದಾರರಿದ್ದರೆ, ಅಂತಿಮ ಮದಾರರ ಪಟ್ಟಿಯಲ್ಲಿ 12.71 ಲಕ್ಷ ಮತದಾರರಿದ್ದಾರೆ ಎಂದು ವಿವರಿಸಿದರು.

18-19 ವರ್ಷ ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರಡುಪಟ್ಟಿಯಲ್ಲಿ 6.45 ಲಕ್ಷ ಮತದಾರರಿದ್ದರೆ, ಅಂತಿಮಪಟ್ಟಿಯಲ್ಲಿ 10.34 ಮತದಾರರಿದ್ದಾರೆ. ಒಟ್ಟು.3.88 ಲಕ್ಷ ಮತದಾರರ ಅಧಿಕವಾಗಿದ್ದಾರೆ. ಸೇವಾ ಮತದಾರರು ಒಟ್ಟು 46,501ರಷ್ಟು ಇದ್ದಾರೆ. 3,164 ಸಾಗರೋತ್ತರ ಮತದಾರರಿದ್ದಾರೆ. ವಿಕಲಚೇತನ ಮತದಾರರು 5.62 ಲಕ್ಷ ಮಂದಿ ಇದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು 7,17,201 ಮತದಾರರಿದ್ದು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಒಟ್ಟು 1.67,556 ಮತದಾರರಿದ್ದಾರೆ ಎಂದು ಹೇಳಿದರು.

ಮತದಾರರ ಗುರುತಿನ ಚೀಟಿಗಳನ್ನು ಮತದಾರರಿಗೆ ತ್ವರಿತ ಅಂಚೆ ಸೇವೆಯ ಮೂಲಕ ಆಯಾ ವಿಳಾಸಗಳಿಗೆ ರವಾನಿಸಲಾಗುತ್ತಿದೆ. ನವೆಂಬರ್ 2023ರ ಅಂತ್ಯದ ವೇಳೆಗೆ 17.47 ಮತದಾರರ ಗುರುತಿನ ಚೀಟಿಗಳನ್ನು ಯಶಸ್ವಿಯಾಗಿ ತ್ವರಿತ ಅಂಚೆ ಮೂಲಕ ನೇರವಾಗಿ ಮತದಾರರಿಗೆ ತಲುಪಿಸಲಾಗಿದೆ. ಪ್ರಸ್ತುತ 10.76 ಲಕ್ಷ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿದ್ದು, ಪ್ರಸ್ತುತ ಮತದಾರರಿಗೆ ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

ಅಂತಿಮ ಮತದಾರರ ಪಟ್ಟಿ ಪ್ರಕಾರ ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಆಗಿದೆ. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಸಮಯದಲ್ಲಿ 845 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿದ್ದು, 552 ಮತಗಟ್ಟೆಗಳು ಹೆಚ್ಚಳವಾಗಿವೆ. ಕಳೆದ 2023 ರ ಸಾಲಿನ ವಿಧಾನಸಭೆ ಚುನಾವಣೆ ವೇಳೆ 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಕ್ಷಣವೇ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.

ಮತದಾರರು ತುರ್ತಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ಮನವಿ ಮಾಡಲಾಗಿದ್ದು, ಅರ್ಹ ಮತದಾರರು ಅರ್ಜಿಗಳನ್ನು ಸಲ್ಲಿಸಲು ತಮ್ಮ ಮೊಬೈಲ್ ನಲ್ಲಿ ವೋಟರ್ ಹೆಲ್ಪಲೈನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ತಾವೇ ಅರ್ಜಿ ಸಲ್ಲಿಸಬಹುದು ಅಥವಾ https://voterportal.eci.gov.in/ ಪೋರ್ಟಲ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮ ರಾವ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT