ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವರ್ಷದಲ್ಲಿ 906 ಬಾಲ್ಯವಿವಾಹ.. ಮೂರು ವರ್ಷಗಳಲ್ಲಿ 986 ಬಾಲ ಗರ್ಭಿಣಿಯರು

Published 23 ಫೆಬ್ರುವರಿ 2024, 20:17 IST
Last Updated 23 ಫೆಬ್ರುವರಿ 2024, 20:17 IST
ಅಕ್ಷರ ಗಾತ್ರ

ಬೆಂಗಳೂರು: ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿ ಹಾಗೂ ತಾಯಂದಿರ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನ ಪರಿಷತ್‌ನಲ್ಲಿ ನೀಡಿದ ಅಂಕಿ–ಅಂಶಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 

ಬಿಜೆಪಿಯ ಭಾರತಿ ಶೆಟ್ಟಿ, ಕಾಂಗ್ರೆಸ್‌ನ ಉಮಾಶ್ರೀ, ಜೆಡಿಎಸ್‌ನ ಟಿ.ಎ.ಶರವಣ, ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೇ ವರ್ಷದಲ್ಲಿ 906 ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿವೆ. ಮೂರು ವರ್ಷಗಳಲ್ಲಿ 986 ಬಾಲಕಿಯರು ಗರ್ಭಿಣಿ ಹಾಗೂ ತಾಯಂದಿರಾಗಿದ್ದಾರೆ ಎಂದು ಹೆಬ್ಬಾಳ್ಕರ್  ಹೇಳಿದರು. 

ಈ ಅಂಕಿ–ಅಂಶಗಳ ಬಗ್ಗೆ ಆಕ್ಷೇಪ ಎತ್ತಿದ ಕಾಂಗ್ರೆಸ್‌ನ ಉಮಾಶ್ರೀ, ಬಿಜೆಪಿಯ ಭಾರತಿಶೆಟ್ಟಿ, ಆರೋಗ್ಯ ಇಲಾಖೆ ನೀಡಿದ ಸಂಖ್ಯೆಗೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿದ ಮಾಹಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ಸದನವನ್ನು ತಪ್ಪು ದಾರಿಗೆ ಎಳೆಯುವ ಯತ್ನ ಎಂದು ದೂರಿದರು.

‘ಮಕ್ಕಳ ಪ್ರೀತಿ ಪ್ರೇಮ, ಆಕರ್ಷಣೆಗೆ ಒಳಗಾಗುತ್ತಿರುವುದು, ಪೋಷಕರ ನಿರ್ಲಕ್ಷ್ಯತನದಿಂದ ಓಡಿ ಹೋಗಿ ಬಾಲ್ಯ ವಿವಾಹವಾಗುತ್ತಿದ್ದಾರೆ. ನೆರೆ ರಾಜ್ಯದ ‍ವಧು–ವರರ ಮಧ್ಯದ ವಿವಾಹಗಳಿಂದಾಗಿ ಕೋಲಾರದಂತಹ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂಬ ಸಚಿವೆಯ ಮಾತಿಗೂ ಬಿಜೆಪಿ–ಜೆಡಿಎಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 

ಯಾವುದೇ ಪೋಷಕರು ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಇಂತಹ ಉತ್ತರ ನೀಡುವ ಮೊದಲು ಜವಾಬ್ದಾರಿ ಸ್ಥಾನದಲ್ಲಿ ಇರುವವರು ಆಲೋಚಿಸಬೇಕು. ಈ ರೀತಿಯ ಉತ್ತರ ಸಿದ್ಧಪಡಿಸಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಭಾರತಿ ಶೆಟ್ಟಿ, ಎನ್‌.ರವಿಕುಮಾರ್ ಮತ್ತಿತರರು ಆಗ್ರಹಿಸಿದರು.

ಸದಸ್ಯರ ಟೀಕೆ, ಆಕ್ಷೇಪಣೆಗಳಿಗೆ ವಿಚಲಿತರಾದ ಸಚಿವೆ, ‘ನಾನು ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆ ಎಲ್ಲದಕ್ಕೂ ಸಮರ್ಪಕ ಉತ್ತರ ನೀಡುವೆ. ಬಾಲ್ಯವಿವಾಹ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ದೊರೆತಿದೆ. ಜನರಲ್ಲಿ ಜಾಗೃತಿ ಮೂಡಿಸಲು, ಪ್ರಕರಣಗಳನ್ನು ತಡೆಯಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು. 

ಪರಿಷತ್‌ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಭೆ ಕರೆದು ಇನ್ನಷ್ಟು ಚರ್ಚೆ ನಡೆಸುವಂತೆ ಸಲಹೆ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ ಚರ್ಚೆಗೆ ತೆರೆಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT