ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದ ನಂತರ ಹೃದಯ ತಪಾಸಣೆಗೆ ಮುಗಿಬಿದ್ದ ಜನ

Last Updated 2 ನವೆಂಬರ್ 2021, 7:34 IST
ಅಕ್ಷರ ಗಾತ್ರ

ಫಿಟ್‌ನೆಸ್ ಐಕಾನ್ ಮತ್ತು ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ನಂತರ ಆತಂಕಕ್ಕೊಳಗಾಗಿರುವ ಜನರು ತಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಲು ಸೋಮವಾರ ಬೆಂಗಳೂರಿನಾದ್ಯಂತ ಗುಂಪು ಗುಂಪಾಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು.

ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಇದೇ ಮೊದಲ ಬಾರಿಗೆ ಸಣ್ಣಪುಟ್ಟ ಸಮಸ್ಯೆ ಇರುವ ಹಲವಾರು ರೋಗಿಗಳು ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿವಿಧ ಪರೀಕ್ಷೆಗಳು ಮತ್ತು CT ಆಂಜಿಯೋಗ್ರಾಮ್‌ಗಳಿಗೆ ಒಳಗಾಗಿದ್ದಾರೆ.

'ರಜಾದಿನಗಳಲ್ಲಿ ಹಾಗೂ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಹೊರ ರೋಗಿಗಳ ವಿಭಾಗಕ್ಕೆ ಬರುವವರ ಸಂಖ್ಯೆ ಕಡಿಮೆ ಇರುತ್ತದೆ. ಇತರೆ ದಿನಗಳಲ್ಲಿ ಹೊರ ರೋಗಿಗಳಾಗಿ ಸುಮಾರು 1,200 ಜನರು ಆಸ್ಪತ್ರೆಗೆ ಬರುತ್ತಾರೆ. ಆದರೆ ಇಂದು ಆಸ್ಪತ್ರೆಗೆ ಸುಮಾರು 1,600 ಜನರು ಬಂದಿದ್ದಾರೆ. ಇದರಿಂದಾಗಿ ವೈದ್ಯರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿಗೆ ಒತ್ತಡವನ್ನು ಉಂಟುಮಾಡಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಸೋಮವಾರ ಆಸ್ಪತ್ರೆಗಳಲ್ಲಿ ಸೇರಿದ್ದ ಭಾರಿ ಜನಸಂದಣಿಯು ಕೋವಿಡ್-19 ಸುರಕ್ಷತಾ ನಿಯಮಾವಳಿಗಳನ್ನು ಕೂಡ ಗಾಳಿಗೆ ತೂರಿದೆ.

'ಒಪಿಡಿ ರೋಗಿಗಳಾಗಿ ಕಾಣಿಸಿಕೊಂಡ ಜನರ ಸಂಖ್ಯೆಯಲ್ಲಿ ಅಂದಾಜು ಶೇ 30ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಜನರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆಗಳಿಲ್ಲ. ಒಟ್ಟು ಆಸ್ಪತ್ರೆಗೆ ಆಗಮಿಸಿದವರಲ್ಲಿ ಶೇ 10 ರಿಂದ 20 ರಷ್ಟು ಜನರು ಭಯಭೀತರಾಗಿದ್ದಾರೆ' ಎಂದು ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಕೆ.ಎಸ್. ರವೀಂದ್ರನಾಥ್ ತಿಳಿಸಿದ್ದಾರೆ.

ಡಾ. ಮಂಜುನಾಥ್ ಅವರ ಪ್ರಕಾರ, ಆಸ್ಪತ್ರೆಗೆ ಭೇಟಿ ನೀಡಿದ ಅನೇಕ ರೋಗಿಗಳು ಸ್ಟಾರ್ ನಟನ ಸಾವಿನ ಸುದ್ದಿಯ ಭೀತಿಯಲ್ಲಿ ಮುಳುಗಿರುವುದಾಗಿ ಮತ್ತು ಇದರ ಪರಿಣಾಮವಾಗಿ ರಾತ್ರಿ ಮಲಗಲು ಸಾಧ್ಯವಾಗುತ್ತಿಲ್ಲ ಮತ್ತು ಎದೆ ನೋವಿನ ಅನುಭವವಾಗುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ನಗರದಾದ್ಯಂತ ಸ್ಟಾರ್ ನಟನ ಅಕಾಲಿಕ ಸಾವಿನಿಂದಾಗಿ ಭೀತಿಗೊಳಗಾಗಿರುವ ಜನರು ತಮ್ಮ ಹೃದಯದ ಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಆಸ್ಪತ್ರೆಗಳಿಗೆ ಮುಗಿ ಬೀಳುತ್ತಿರುವ ದೃಶ್ಯ ಕಂಡುಬರುತ್ತಿದೆ.

ಎಚ್‌ಎಎಲ್‌ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ 20ರಿಂದ 45 ವರ್ಷದೊಳಗಿನ ಹನ್ನೆರಡು ರೋಗಿಗಳಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಆಂತಕದಲ್ಲಿದ್ದದ್ದನ್ನು ಕಂಡು ಸಿಬ್ಬಂದಿ ಆಶ್ಚರ್ಯಗೊಂಡಿದ್ದಾರೆ ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ರಂಜನ್ ಶೆಟ್ಟಿ ತಿಳಿಸಿದ್ದಾರೆ. ನಗರದ ಸಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ಕೂಡ 30 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ರೋಗಿಗಳು ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಮುಖ್ಯಸ್ಥ ಡಾ.ಶ್ರೀಕಾಂತ್ ಬಿ ಶೆಟ್ಟಿ ಹೇಳಿದ್ದಾರೆ.

'ಸಮಸ್ಯೆಯೆಂದರೆ, ಎಂದಿಗೂ ಕಠಿಣ ಶ್ರಮದಾನ ಮಾಡದ ಅನೇಕರು, ಇತ್ತೀಚೆಗೆ ಜಿಮ್‌ಗೆ ಸೇರಿದ್ದಾರೆ ಮತ್ತು ಕಠಿಣ ವ್ಯಾಯಾಮದ ಕಾರಣ ಎದೆನೋವು ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ. ಹೃದಯದ ಕಾರ್ಯ ವ್ಯವಸ್ಥೆಯನ್ನು ಸುಧಾರಿಸುವ ರೀತಿಯಲ್ಲಿ ಜೀವನಕ್ರಮವನ್ನು ರೂಢಿಸಿಕೊಳ್ಳಬೇಕು. ನಾವು ಆರೋಗ್ಯಕರ ಆಯ್ಕೆಗಳನ್ನು ಮಾಡಬೇಕಾಗಿದೆ ಎಂದು ಡಾ. ಶೆಟ್ಟಿ ಹೇಳಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದಾಗಿ ಜನರು ಆತಂಕಕ್ಕೊಳಗಾಗಿರುವ ಈ ಸಮಸ್ಯೆಯು ಈಗ ಫಿಟ್‌ನೆಸ್ ಉದ್ಯಮಕ್ಕೆ ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರವನ್ನು ಪ್ರೇರೇಪಿಸುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

'ಇದು ಸಂಪೂರ್ಣವಾಗಿ ಅನಿಯಂತ್ರಿತ ಪ್ರದೇಶವಾಗಿರುವುದರಿಂದ, ಜಿಮ್‌ಗಳು ಮತ್ತು ಫಿಟ್‌ನೆಸ್ ಕೇಂದ್ರಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಹೊರತರಲು ಸರ್ಕಾರ ಪರಿಗಣಿಸಬೇಕಾಗಿದೆ. ಇದರಿಂದಾಗಿ ಯಾವುದೇ ರೀತಿಯ ವರ್ಕೌಟ್ ಮಾಡುವ ಮುನ್ನ ವ್ಯಕ್ತಿಯ ಸಂಪೂರ್ಣ ತಪಾಸಣೆ ಇರುತ್ತದೆ. ಈಗಾಗಲೇ ಹಲವಾರು ಹೃದ್ರೋಗ ತಜ್ಞರೊಂದಿಗೆ ಮಾತನಾಡಿದ್ದು, ವರದಿ ನೀಡಲು ವಿನಂತಿಸಿರುವುದಾಗಿ ಸುಧಾಕರ್ ತಿಳಿಸಿದ್ದಾರೆ.

'ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದ 46 ವರ್ಷದ ಪುನೀತ್ ಅವರು ಹೃದಯ ಸ್ತಂಭನದಿಂದಾಗಿ ಹಠಾತ್ ಸಾವಿಗೀಡಾದ ಬಳಿಕ ಹೃದಯದ ಸುರಕ್ಷತೆ ಮತ್ತು ವರ್ಕೌಟ್ ಪರಿಣಾಮಗಳ ಬಗ್ಗೆ ಜನರು ಭಯಪಡುವುದು ಸಹಜ' ಎಂದಿದ್ದಾರೆ.

ವಿಕಿರಣ ಹಾನಿ ಉಂಟಾಗುವುದರಿಂದಾಗಿ ಯಾರೂ ಕೂಡ ಸಿಟಿ ಆಂಜಿಯೋಗ್ರಫಿಗೆ ಒಳಗಾಗಬಾರದು. ಮೊದಲ ಬಾರಿಗೆ OPD ಹೃದ್ರೋಗ ರೋಗಿಗಳನ್ನು ECG, ECHO ಮತ್ತು ರಕ್ತ ಪರೀಕ್ಷೆಗಳಿಗೆ ಒಳಪಡಿಸಬೇಕು. ರೋಗಲಕ್ಷಣಗಳು ಕಂಡುಬಂದರೆ ಮಾತ್ರ ಅಂತವರನ್ನು ಟ್ರೆಡ್‌ಮಿಲ್ ಪರೀಕ್ಷೆಗೆ ಒಳಪಡಿಸಬೇಕು. ಸಿಟಿ ಆಂಜಿಯೋಗ್ರಫಿ ಕೊನೆಯ ಉಪಾಯವಾಗಿದೆ' ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT