ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹15 ಸಾವಿರ ಕೋಟಿ ಮೊತ್ತದ ವಿದ್ಯುತ್ ಯೋಜನೆಗೆ ಒಪ್ಪಂದ: ಸಚಿವ ಕೆ.ಜೆ.ಜಾರ್ಜ್‌

Published 9 ನವೆಂಬರ್ 2023, 11:05 IST
Last Updated 9 ನವೆಂಬರ್ 2023, 11:05 IST
ಅಕ್ಷರ ಗಾತ್ರ

ಬೆಂಗಳೂರು: ಜಲ ವಿದ್ಯುತ್‌, ಸೋಲಾರ್‌ ಸೇರಿದಂತೆ ₹15 ಸಾವಿರ ಕೋಟಿ ಮೊತ್ತದ ವಿವಿಧ ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಗುರುವಾರ ಒಪ್ಪಂದ ಮಾಡಿಕೊಂಡಿತು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಹಾಗೂ ‘ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌’ (ಟಿಎಚ್‌ಡಿಸಿಎಲ್‌) ತಾಂತ್ರಿಕ ನಿರ್ದೇಶಕ ಭೂಪೇಂದ್ರ ಗುಪ್ತ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್‌, ಕೇಂದ್ರ ಸರ್ಕಾರದ ಟಿಎಚ್‌ಡಿಸಿಎಲ್‌ ಜತೆ ಮಾಡಿಕೊಂಡಿರುವ ಈ ಒಪ್ಪಂದ ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸಲು, ಕೊರತೆ ನೀಗಿಸಲು ಸಹಕಾರಿಯಾಗಲಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಯೋಜನೆಯ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.

‘ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌ ಹಾಗೂ ಟಿಎಚ್‌ಡಿಸಿಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ಬಿಷ್ಣೋಯ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಲಾಗಿತ್ತು. ಒಪ್ಪಂದದಂತೆ ಕದ್ರಾ ಜಲಾಶಯದಲ್ಲಿ 100 ಮೆಗಾವಾಟ್‌ ಸಾಮರ್ಥ್ಯದ ‘ಫ್ಲೋಟಿಂಗ್‌ ಸೋಲಾರ್‌’, 170 ಮೆಗಾವಾಟ್‌ ಸಾಮರ್ಥ್ಯದ ನೆಲದಡಿಯ ವಿದ್ಯುತ್‌ ಯೋಜನೆ, ಕೆಪಿಸಿಎಲ್ ಆವರಣದಲ್ಲಿ ಮೇಲ್ಛಾವಣಿ ಸೌರ ಸ್ಥಾವರ, ವಾರಾಹಿಯಲ್ಲಿ 1,500 ಮೆಗಾವಾಟ್‌ ಸಾಮರ್ಥ್ಯದ ‘ಪಂಪ್ಡ್‌ ಸ್ಟೋರೇಜ್‌’ ಘಟಕ ಸ್ಥಾಪನೆ ಮಾಡಲಾಗುವುದು ಎಂದು ವಿವರಿಸಿದರು.

ಬೀದರ್‌ನಲ್ಲಿ 500 ಮೆಗಾವಾಟ್‌ ಸಾಮರ್ಥ್ಯದ ಸೋಲಾರ್ ಪಾರ್ಕ್‌ ಸ್ಥಾಪಿಸಲು ಕ್ರೆಡಲ್ ಸಂಸ್ಥೆ ಹಾಗೂ ಟಿಎಚ್‌ಡಿಸಿಎಲ್‌ ಮಧ್ಯೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳಲಾಯಿತು.

ಟಿಎಚ್‌ಡಿಸಿಎಲ್‌ ಮುಖ್ಯ ವ್ಯವಸ್ಥಾಪಕ ಸಂದೀಪ್‌ ಸಿಂಘಾಲ್‌, ಟಿಹೆಚ್‌ಡಿಸಿಎಲ್‌ ಸಹಾಯಕ ಮುಖ್ಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಉದಯಗಿರಿ, ವಿಶೇಷ ಅಧಿಕಾರಿ ಎ.ಕೆ. ವಿಜಯ್‌ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT