ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಉತ್ಪಾದನೆ ಭಾರಿ ಕುಸಿತ

ಕೈಕೊಟ್ಟ ಹಿಂಗಾರು; ರಾಜ್ಯದಲ್ಲಿ ಜಲಕ್ಷಾಮ ಭೀತಿ; ಕೃಷಿ ಇಲಾಖೆ ಆತಂಕ
Last Updated 18 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು:‌ ಹಿಂಗಾರು ಮಳೆಯೂ ಕೈಕೊಟ್ಟಿದೆ. ಪರಿಣಾಮ, ರಾಜ್ಯದಲ್ಲಿ ಈ ಬಾರಿ ಜಲಕ್ಷಾಮದ ಭೀತಿ ಎದುರಾಗಿದ್ದು, ಆಹಾರಧಾನ್ಯ ಉತ್ಪಾದನೆ‌ಯಲ್ಲಿ ಭಾರಿ ಕುಸಿತ ಉಂಟಾಗುವ ಸಾಧ್ಯತೆ ಇದೆ.

ಪ್ರಸಕ್ತ ಸಾಲಿನಲ್ಲಿ 135 ಲಕ್ಷ ಟನ್‌ ಆಹಾರ ಉತ್ಪಾದನೆ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದೆ. ಆದರೆ, ಮುಂಗಾರು– ಹಿಂಗಾರು ಎರಡೂ ಅವಧಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೇ ಇರುವುದರಿಂದ ಆಹಾರಧಾನ್ಯಗಳ ಇಳುವರಿ ಕುಂಠಿತಗೊಂಡು ಸಂಕಷ್ಟ ಎದುರಾಗುವ ಆತಂಕವನ್ನು ಇಲಾಖೆ ವ್ಯಕ್ತಪಡಿಸಿದೆ.

ಏಕದಳ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ, ಮುಸುಕಿನ ಜೋಳ, ಸಜ್ಜೆ, ಗೋಧಿ, ತೃಣ ಧಾನ್ಯ ಒಟ್ಟು 120 ಲಕ್ಷ ಟನ್‌ ಮತ್ತು ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ ಒಟ್ಟು 15 ಲಕ್ಷ ಟನ್‌ ಇಳುವರಿ ನಿರೀಕ್ಷಿಸಲಾಗಿದೆ.

ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಬಿತ್ತನೆ ಪ್ರಗತಿ, ಮಳೆಯ ಅಭಾವ ಹಾಗೂ ಒಣ ಹವೆಯಿಂದ ಬೆಳೆಗಳ ಇಳುವರಿಯಲ್ಲಿ ಉಂಟಾಗಿರುವ ಹಾನಿ ಪರಿಗಣಿಸಿ ಇಳುವರಿ ಪ್ರಮಾಣ ಅಂದಾಜಿಸಲಾಗು
ತ್ತದೆ. ಆದರೆ, 2012–13ನೇ ಸಾಲಿನಿಂದ ಈವರೆಗೆ 2013–14 ಬಿಟ್ಟು) ಆಹಾರ ಉತ್ಪಾದನೆ ಪ್ರಮಾಣದ ಗುರಿ ಸಾಧಿಸಲು ಸಾಧ್ಯವಾಗಿಲ್ಲ.

ಮಳೆ ಅಭಾವ: ಒಟ್ಟು 176 ತಾಲ್ಲೂಕುಗಳ ಪೈಕಿ, ಮುಂಗಾರು ಅವಧಿಯಲ್ಲಿ (ಜೂನ್‌ 1ರಿಂದ ಸೆ. 30) 85 ತಾಲ್ಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ಆದರೆ, ಹಿಂಗಾರು ಅವಧಿಯಲ್ಲಿ (ಅ. 1ರಿಂದ ನ. 16ರವರೆಗೆ) 168 ತಾಲ್ಲೂಕುಗಳಲ್ಲಿ ಕೊರತೆ ಉಂಟಾಗಿದೆ.‌ ಅದರಲ್ಲೂ 72 ತಾಲ್ಲೂಕುಗಳಲ್ಲಿ ತೀವ್ರ ಕೊರತೆ ಉಂಟಾಗಿದೆ.

ಹಿಂಗಾರು ಅವಧಿಯಲ್ಲಿ ಒಟ್ಟಾರೆ ಶೇ 51ರಷ್ಟು ಮಳೆ ಅಭಾವ ಉಂಟಾಗಿದೆ. ಉತ್ತರ ಒಳನಾಡು ಭಾಗದಲ್ಲಿ ಮುಂಗಾರು ಮಳೆ ಶೇ 37ರಷ್ಟು ಕೊರತೆಯಾಗಿದ್ದರೆ, ಹಿಂಗಾರು ಶೇ 69ರಷ್ಟು ಕೊರತೆಯಾಗಿದೆ. ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಹಿಂಗಾರು ತಲಾ ಶೇ 43ರಷ್ಟು ಕೈಕೊಟ್ಟಿದೆ.

‘ಕೇಂದ್ರದ ಮಾರ್ಗಸೂಚಿ ಪ್ರಕಾರ ಜನವರಿ ಮೊದಲ ವಾರದಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ರಾಜ್ಯದಲ್ಲಿ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಒಟ್ಟು ಪರಿಸ್ಥಿತಿ ಅವಲೋಕಿಸಿ ಹಿಂಗಾರು ಅವಧಿಯಲ್ಲಿನ ಬರಪೀಡಿತ ತಾಲ್ಲೂಕು
ಗಳನ್ನು ರಾಜ್ಯ ಸರ್ಕಾರ ಘೋಷಿಸಲಿದೆ’ ಎಂದು ಕಂದಾಯ ಇಲಾಖೆಯ ತುರ್ತು ವಿಕೋಪ ಉಸ್ತುವಾರಿ ಘಟಕದ ಅಧಿಕಾರಿ ಸುಧಾಕರ ಶೆಟ್ಟಿ ಮಾಹಿತಿ ನೀಡಿದರು.

ಹಿಂಗಾರು ಅವಧಿಯಲ್ಲಿ ಒಟ್ಟು 31.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಈವರೆಗೆ 1.67 ಲಕ್ಷ ಹೆಕ್ಟೇರ್‌ ನೀರಾವರಿ ಮತ್ತು 12.82 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಬಿತ್ತನೆ ಆಗುವ ಸಾಧ್ಯತೆ ಇಲ್ಲ. ಅಷ್ಟೇ ಅಲ್ಲ, ಬಿತ್ತಿದ ಬೆಳೆ ತೇವಾಂಶ ಕೊರತೆ, ಶುಷ್ಕ ವಾತಾವರಣದಿಂದ ಕೈಗೆ ಸಿಗುವ ನಿರೀಕ್ಷೆಯೂ ಇಲ್ಲ. ಹಿಂಗಾರು ಅವಧಿಯಲ್ಲಿ ವಿಜಯಪುರ, ಕಲಬುರ್ಗಿ, ಬೆಳಗಾವಿ, ಬಾಗಲಕೋಟೆ, ರಾಯಚೂರು, ಗದಗ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಈ ಪೈಕಿ, ರಾಯಚೂರು ಜಿಲ್ಲೆಯಲ್ಲಿ ಶೇ 60ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿದೆ. ಉಳಿದ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 50 ದಾಟಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರಕ್ಕೆ ಇಂದು ಮಾಹಿತಿ

ಬರ ಅಧ್ಯಯನಕ್ಕೆ ರಾಜ್ಯಕ್ಕೆ ಬಂದಿರುವ ಕೇಂದ್ರ ತಂಡದ ಜೊತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಕಂದಾಯ ಸಚಿವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಸಭೆ ಸೇರಲಿದ್ದು, ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದೆ.

‘ಕೊಡಗು ಸೇರಿದಂತೆ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ನಷ್ಟ ಪರಿಹಾರವಾಗಿ ಕೇಂದ್ರದಿಂದ ₹ 500 ಕೋಟಿ ನೆರವು ಸಿಗುವ ವಿಶ್ವಾಸವಿದೆ. ದೆಹಲಿಯಲ್ಲಿ ಗೃಹ, ಕೃಷಿ ಸಚಿವರ ಉಪಸ್ಥಿತಿಯಲ್ಲಿ ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಆಗಲಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT