ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುದಾನಿತ ಶಿಕ್ಷಕರಿಗೂ ಸರ್ಕಾರಿ ಸೌಲಭ್ಯ ಸಿಗಲಿ: ಬಸವರಾಜ ಹೊರಟ್ಟಿ

Published : 14 ಸೆಪ್ಟೆಂಬರ್ 2024, 15:19 IST
Last Updated : 14 ಸೆಪ್ಟೆಂಬರ್ 2024, 15:19 IST
ಫಾಲೋ ಮಾಡಿ
Comments

ಬೆಂಗಳೂರು: ಸರ್ಕಾರಿ ನೌಕರರಿಗೆ ಸಿಗುವ ಸವಲತ್ತುಗಳು ಅನುದಾನಿತ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗೂ ಸಿಗಬೇಕು. ಪಾಠ ಮಾಡುವುದನ್ನು ಬಿಟ್ಟು ನ್ಯಾಯಕ್ಕಾಗಿ ಹೋರಾಡುವುದರಲ್ಲೇ ಅವರ ಸಮಯ ವ್ಯರ್ಥವಾಗಬಾರದು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. 

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶ ಮತ್ತು ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳು ನಡೆಸುವ ಶಾಲೆಗಳಲ್ಲೂ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಮಕ್ಕಳು ಹಾಗೂ ಶಿಕ್ಷಕರ ಅನುಪಾತವನ್ನು 30:1ಕ್ಕೆ ನಿಗದಿ ಮಾಡಬೇಕು. ಪ್ರತಿ ತಾಲ್ಲೂಕಿನ ಶಾಲೆಗಳ ಶಿಕ್ಷಕರು ಮತ್ತು ಶಾಲಾ ಮಕ್ಕಳ ಸಂಖ್ಯೆ ಕುರಿತು ಮಾಹಿತಿ ಸಂಗ್ರಹಿಸಬೇಕು. ನಂತರವೇ ಹೆಚ್ಚುವರಿ ಶಿಕ್ಷಕರನ್ನು ಬೇರೆ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದರು.

ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಶಿಕ್ಷಕರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಗೋಪಾಲ್ ಮಾತನಾಡಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸ್ಥಿತಿ ಶೋಚನೀಯವಾಗಿದೆ. ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು. ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯರಾದ ಎಸ್‌.ಎಲ್‌. ಭೋಜೇಗೌಡ, ಪುಟ್ಟಣ್ಣ, ಶಶೀಲ್ ನಮೋಶಿ, ಎಸ್.ವಿ. ಸಂಕನೂರ, ಹಣಮಂತ ನಿರಾಣಿ, ಪ್ರಕಾಶ್‌ ಹುಕ್ಕೇರಿ, ರಾಮೋಜಿಗೌಡ, ಡಿ.ಟಿ. ಶ್ರೀನಿವಾಸ್‌, ಸಂಘದ ಪದಾಧಿಕಾರಿಗಳಾದ ಚಿತ್ರಕಲಾ, ಸಿ.ಎಂ.ನಾಗರಾಜ್, ಎಂ.ಕೆ.ರಾಜು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷರಾಗಿದ್ದ ಗುಂಡೂರಾವ್: ದಿನೇಶ್‌

‘ಮುಖ್ಯಮಂತ್ರಿಯಾಗಿದ್ದ ನನ್ನ ತಂದೆ ಗುಂಡೂರಾವ್ ಅವರು ರಾಜಕೀಯ ಸೇರುವ ಮೊದಲು ಕುಶಾಲನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದರು’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ನೆನಪು ಮಾಡಿಕೊಂಡರು.  ಗುಂಡೂರಾವ್‌ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿಕ್ಷಕರ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದರು. ನೇಮಕಾತಿಗೆ ಆದ್ಯತೆ ನೀಡಿದ್ದರು. ಇಂದು ಸರ್ಕಾರಿ ಶಾಲೆಗಳಂತೆ ಅನುದಾನಿತ ಶಾಲೆಗಳಿಗೂ ರಾಜ್ಯ ಸರ್ಕಾರ ಬಿಸಿಯೂಟ ಸೇರಿದಂತೆ ಎಲ್ಲ ಸವಲತ್ತುಗಳನ್ನೂ ನೀಡುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT