ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಕಲಾಪದ ಸಮಗ್ರ ವಿವರ ಶೀಘ್ರ ಡಿಜಿಟಲ್‌ನಲ್ಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

Last Updated 8 ಮಾರ್ಚ್ 2023, 16:14 IST
ಅಕ್ಷರ ಗಾತ್ರ

ಬೆಂಗಳೂರು: 15ನೇ ವಿಧಾನಸಭೆಯ ಎಲ್ಲ ಅಧಿವೇಶನಗಳ ಸಂಪೂರ್ಣ ಕಲಾಪದ ವಿವರವನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗುವುದು ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಾಪದ ನೇರ ಪ್ರಸಾರವನ್ನು ವೆಬ್‌ಕಾಸ್ಟಿಂಗ್‌ ಮೂಲಕ ಮಾಡಲಾಗುತ್ತಿತ್ತು. ಆಯಾ ದಿನದ ಪ್ರಶ್ನೋತ್ತರವನ್ನೂ ಅಪ್ಲೋಡ್‌ ಮಾಡಲಾಗುತ್ತಿತ್ತು. ಈಗ ಚರ್ಚೆಯ ವಿವರವನ್ನು ಸಂಪೂರ್ಣವಾಗಿ ಅಪ್ಲೋಡ್‌ ಮಾಡಲಾಗುವುದು’ ಎಂದರು.

ಸಾರ್ವಜನಿಕರು ಒಂದು ಪದವನ್ನು ಟೈಪ್‌ ಮಾಡುವ ಮೂಲಕ ಚರ್ಚೆಯ ಸಂಪೂರ್ಣ ವಿವರ ಪಡೆಯಲು ಮುಂದಿನ ದಿನಗಳಲ್ಲಿ ಅವಕಾಶವಾಗಲಿದೆ. ಕಲಾಪಕ್ಕೆ ಸಂಬಂಧಿಸಿದ ವಿಡಿಯೊ ತುಣುಕನ್ನೂ ಪಡೆಯಬಹುದು ಎಂದು ವಿವರಿಸಿದರು.

15ನೇ ವಿಧಾನಸಭೆಯಲ್ಲಿ 15 ಬಾರಿ ವಿಧಾನಮಂಡಲ ಅಧಿವೇಶನ ನಡೆಸಲಾಗಿದೆ. 167 ದಿನಗಳ ಕಲಾಪ ನಡೆದಿದ್ದು, 200 ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ. ಪ್ರತಿ ವರ್ಷ ಸರಾಸರಿ 45 ದಿನಗಳ ಕಲಾಪ ನಡೆದಿದೆ. ನೇರ ಪ್ರಸಾರದ ಹೊರತಾಗಿ 1.10 ಲಕ್ಷ ಜನರು ವಿಧಾನಸಭೆಯ ಗ್ಯಾಲರಿಯಿಂದ ಕಲಾಪ ವೀಕ್ಷಿಸಿದ್ದಾರೆ ಎಂದರು.

ಈ ಅವಧಿಯಲ್ಲಿ ಸಂವಿಧಾನದ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಒಂದು ದೇಶ– ಒಂದು ಚುನಾವಣೆ ಬಗ್ಗೆಯೂ ಚರ್ಚಿಸಲಾಗಿದೆ. ಸಂಸದೀಯ ಮೌಲ್ಯಗಳ ಕುರಿತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೇ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಇವೆಲ್ಲವೂ 15ನೇ ವಿಧಾನಸಭೆ ಅವಧಿಯಲ್ಲಿನ ವಿಶೇಷಗಳು ಎಂದು ಕಾಗೇರಿ ಹೇಳಿದರು.

ಸ್ವಾಯತ್ತತೆ ಅಗತ್ಯ: ವಿಧಾನಸಭೆ ಸಚಿವಾಲಯದಲ್ಲಿ 77 ಸಿಬ್ಬಂದಿಯನ್ನು ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿದೆ. ವಿಧಾನಸಭೆ ಸಚಿವಾಲಯ ಮತ್ತು ಸಭಾಧ್ಯಕ್ಷರ ಕಚೇರಿಗೆ ಹಣಕಾಸು ವಿಚಾರದಲ್ಲಿ ಸ್ವಾಯತ್ತತೆ ಅಗತ್ಯ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ ಎಂದರು.

ಇ–ವಿಧಾನ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ ಎಂಬ ಕೊರಗೂ ತಮಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT