ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ, ಕೊಲೆ ಬೆದರಿಕೆ: ನಿರ್ದೇಶಕ ಮಂಸೋರೆ ವಿರುದ್ಧ ಪತ್ನಿ ದೂರು

Published 28 ಜನವರಿ 2024, 6:34 IST
Last Updated 28 ಜನವರಿ 2024, 6:34 IST
ಅಕ್ಷರ ಗಾತ್ರ

ಬೆಂಗಳೂರು:  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಮಂಜುನಾಥ್ ಸೋಮಕೇಶವ್ ರೆಡ್ಡಿ ಉರುಫ್ ಮಂಸೋರೆ ಹಾಗೂ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಅಖಿಲಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

'ಸುಬ್ರಹ್ಮಣ್ಯಪುರ ಠಾಣೆಗೆ ಅಖಿಲಾ‌ ದೂರು ನೀಡಿದ್ದಾರೆ. ಮಂಜುನಾಥ್, ಅವರ ತಾಯಿ ವೆಂಕಟಲಕ್ಷಮ್ಮ, ಅಕ್ಕ ಹೇಮಲತಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ತಿಳಿಸಿದರು.

'ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ನಮ್ಮ ಪೋಷಕರು ಪತಿ ಮಂಜುನಾಥ್‌ಗೆ ₹10 ಲಕ್ಷ ನೀಡಿದ್ದರು. ಇದೀಗ ₹30 ಲಕ್ಷ ಮೌಲ್ಯದ ಕಾರು ಕೊಡಿಸುವಂತೆ ಪತಿ ಹಾಗೂ ಅತ್ತೆ ಪೀಡಿಸುತ್ತಿದ್ದಾರೆ' ಎಂದು ಅಖಿಲಾ ಆರೋಪಿದ್ದಾರೆ.

ದೂರಿನ ವಿವರ: ‘ಮಂಜುನಾಥ್ ಅವರನ್ನು ಹಲವು ವರ್ಷಗಳಿಂದ ಪ್ರೀತಿಸಿ 2021ರ ಆಗಸ್ಟ್ 15ರಂದು ಮದುವೆ ಆಗಿದ್ದೆ. ಅವರ ಸಹೋದರಿ ಹೇಮಲತಾ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದರಿಂದ, ನನ್ನ ಪೋಷಕರು 180 ಗ್ರಾಂ ತೂಕದ ಚಿನ್ನಾಭರಣ, 1 ಕೆ.ಜಿ 500 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ₹ 9 ಲಕ್ಷ ನಗದು ನೀಡಿದ್ದರು’ ಎಂದು ಅಖಿಲಾ ದೂರಿನಲ್ಲಿ ತಿಳಿಸಿದ್ದಾರೆ.

‘ಮದುವೆ ನಂತರ ₹ 1.50 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಕೊಟ್ಟಿದ್ದೆವು. ಮಂಜುನಾಥ್‌ನನ್ನು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ₹ 2.21 ಲಕ್ಷ ಮೌಲ್ಯದ ಜಾವಾ ಬೈಕ್ ಹಾಗೂ ₹ 1.06 ಲಕ್ಷ ಮೌಲ್ಯದ ಮೊಬೈಲ್ ಕೊಡಿಸಿದ್ದೆ. ಕಂಪನಿಯೊಂದರಲ್ಲಿ ವ್ಯವಸ್ಥಾಪಕಿ ಆಗಿದ್ದ ನಾನು, ಸಂಬಳವನ್ನೆಲ್ಲ ಪತಿಗೆ ನೀಡುತ್ತಿದ್ದೆ.’

‘2022ರಲ್ಲಿ ಸಿನಿಮಾ ಮಾಡಲು ಪತಿ ಹಣ ಕೇಳಿದ್ದರು. ಪೋಷಕರಿಂದ ₹ 10 ಲಕ್ಷ ತಂದು ಕೊಟ್ಟಿದ್ದೆ. ₹ 76 ಸಾವಿರ ಮೌಲ್ಯದ ಐಫೋನ್ ಸಹ ಕೊಡಿಸಿದ್ದೆ. ಮದುವೆಯಾದ ಆರಂಭದಲ್ಲಿ ಪತಿ ಹಾಗೂ ಅತ್ತೆ ಚೆನ್ನಾಗಿ ನೋಡಿಕೊಂಡಿದ್ದರು. ಪತಿಯ ಅಕ್ಕ ಹೇಮಲತಾ ಆಗಾಗ ಮನೆಗೆ ಬಂದು, ನನ್ನ ಬಗ್ಗೆ ಇಲ್ಲಸಲ್ಲದನ್ನು ಹೇಳಲಾರಂಭಿಸಿದಳು. ಇದರಿಂದಾಗಿ ಪತಿ ಹಾಗೂ ಅತ್ತೆ ನನ್ನ ಜೊತೆ ಜಗಳ ಮಾಡಲಾರಂಭಿಸಿದರು. ಮೂವರು ಸೇರಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಪತಿಗೆ ₹ 30 ಲಕ್ಷ ಮೌಲ್ಯದ ಕಾರು ಕೊಡಿಸುವಂತೆಯೂ ಪೀಡಿಸುತ್ತಿದ್ದಾರೆ’ ಎಂದು ಅಖಿಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಯಿ ಹೊರಹಾಕುವಂತೆ ಪಟ್ಟು: ಪತ್ನಿ ನೀಡಿರುವ ದೂರಿಗೆ ಉತ್ತರವಾಗಿ ಪ್ರತಿ ದೂರು ನೀಡಿರುವ ಮಂಸೂರೆ, ‘ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿರುವ ಪತ್ನಿ, ನನ್ನ ಹಾಗೂ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಆತ್ಮಹತ್ಯೆಗೂ ಯತ್ನಿಸಿದ್ದಾರೆ. ನನ್ನ ಪತ್ನಿಯನ್ನು ಬಳಸಿಕೊಂಡು ಅವರ ಸಹೋದರರು ಪಿತೂರಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇವರೆಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದಿದ್ದಾರೆ.

‘ನಾನು ಕೊಡಿಸಿದ್ದ ಚಿನ್ನಾಭರಣ ಜೊತೆಯಲ್ಲಿ, ರಾಷ್ಟ್ರ–ರಾಜ್ಯ ಮಟ್ಟದ ಪ್ರಶಸ್ತಿಯಾಗಿ ಬಂದಿದ್ದ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪತ್ನಿ ತವರು ಮನೆಗೆ ಕೊಂಡೊಯ್ದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ತಾಯಿಯನ್ನು ಮನೆಯಿಂದ ಹೊರಹಾಕುವಂತೆ ಪೀಡಿಸುತ್ತಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಹಾಗೂ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಅವರು ಅರೋಪಿಸಿದ್ದಾರೆ.

ಪತ್ನಿ‌ ಮಾನಸಿಕ‌ ಅಸ್ವಸ್ಥೆ: ಪೊಲೀಸರಿಗೆ ಪ್ರತಿ ದೂರು‌ ನೀಡಿರುವ ಮಂಸೋರೆ, 'ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ' ಎಂದಿದ್ದಾರೆ.

'ತಾಯಿಯನ್ನು ಮನೆಯಿಂದ‌ ಹೊರಹಾಕುವಂತೆ ಪತ್ನಿ ಹಠ ಮಾಡುತ್ತಿದ್ದಾಳೆ. ನನ್ನ ತಾಯಿ‌ ಮೇಲೆಯೇ ಆಕೆ ಹಲ್ಲೆ ಮಾಡಿದ್ದಾಳೆ. ಪತ್ನಿ ಹಾಗೂ ಆಕೆಯ ಮನೆಯವರಿಂದ ಯಾವುದೇ ಹಣ ಪಡೆದಿಲ್ಲ. ಯಾವುದೇ ತನಿಖೆಗೂ ನಾನು ಸಿದ್ಧ' ಎಂದು ಮಂಸೋರೆ ಹೇಳಿದ್ದಾರೆ.

ಹರಿವು, ನಾತಿ ಚರಾಮಿ, ಆ್ಯಕ್ಟ್ 1978 ಹಾಗೂ 19.20.21 ಸಿನಿಮಾಗಳನ್ನು ಮಂಸೂರೆ ನಿರ್ದೇಶನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT