ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣ ದುರುಪಯೋಗ ಆರೋಪ: ತನಿಖೆಗೆ ಸಮಿತಿ ರಚಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ದೆಹಲಿ ಕರ್ನಾಟಕ ಸಂಘ: ಅಮೃತ ಮಹೋತ್ಸವ ‘ಅಕ್ರಮ’
Published : 14 ಸೆಪ್ಟೆಂಬರ್ 2024, 15:33 IST
Last Updated : 14 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಆಚರಣೆಯಲ್ಲಿ ಹಣ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಮಿತಿ ರಚಿಸಿದೆ. 

ಸಂಘದ ಅಮೃತ ಮಹೋತ್ಸವವು 2023ರ ಫೆಬ್ರುವರಿ 25ರಂದು ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ₹2 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಅನುದಾನವನ್ನು ಸಮರ್ಪಕವಾಗಿ ಹಾಗೂ ನಿಯಮಾನುಸಾರವಾಗಿ ಬಳಸಿಲ್ಲ ಎಂದು ಆರೋಪಿಸಿ ಸಂಘದ ಸದಸ್ಯ ಆನಂದಮೂರ್ತಿ ಹಾಗೂ ಇತರರು ಇಲಾಖೆಗೆ 2024ರ ಮೇ ತಿಂಗಳಲ್ಲಿ ದೂರು ನೀಡಿದ್ದರು.

ಹಣ ಬಳಕೆ ಪ್ರಮಾಣಪತ್ರ, ವೆಚ್ಚ ಪಟ್ಟಿ ಹಾಗೂ ಕಾರ್ಯಕ್ರಮ ನಡೆದ ದಾಖಲೆಗಳನ್ನು ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ ಅವರು ಇಲಾಖೆಗೆ ಜೂನ್‌ನಲ್ಲಿ ಸಲ್ಲಿಸಿದ್ದರು. ದೂರು ಅರ್ಜಿ ಬಗ್ಗೆ ಪರಿಶೀಲಿಸಿ ವರದಿ ನೀಡಲು ಇಲಾಖೆಯ ಲೆಕ್ಕಾಧಿಕಾರಿ ಸುರೇಶ್‌ ಬಿ.ನಾಯಕ್‌ ಹಾಗೂ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. 

ಅಧ್ಯಕ್ಷರ ವಿರುದ್ಧ ಒಂಬತ್ತು ಪದಾಧಿಕಾರಿಗಳ ‘ಬಂಡಾಯ’

ಸಂಘದ ನಿಯಮಾವಳಿ ಹಾಗೂ ಸಂವಿಧಾನ ಗಣನೆಗೆ ತೆಗೆದುಕೊಳ್ಳದೆ ಅಧ್ಯಕ್ಷರು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋ‍ಪಿಸಿ ಸಂಘದ ಒಂಬತ್ತು ಪದಾಧಿಕಾರಿಗಳು ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 

ಉಪಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ‍‍ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಖಜಾಂಚಿ ಆಶಾಲತಾ ಎಂ., ಜಂಟಿ ಕಾರ್ಯದರ್ಶಿಗಳಾದ ಅಶ್ವಿನಿ ಬಿ.ಎಸ್‌, ನಾರಾಯಣ ಬಿ., ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ವೆಂಕಟಾಚಲ ಹೆಗಡೆ, ಶುಭಾ ದೇವಿಪ್ರಸಾದ್‌, ನವೀನ್‌ ಕುಮಾರ್ ವಿ., ಜಯಶ್ರೀ ಬಸವರಾಜು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. 

‘ಕರ್ನಾಟಕ ಸರ್ಕಾರದಿಂದ ಪಡೆದ ₹2 ಕೋಟಿ ಹಾಗೂ ಕೇಂದ್ರ ಸರ್ಕಾರದಿಂದ ಪಡೆದ ₹1 ಕೋಟಿ ಅನುದಾನದ ಬಳಕೆ ಪ್ರಮಾಣಪತ್ರ ಕುರಿತು ಹೊಸ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆಯಲು ಅಧ್ಯಕ್ಷರಿಗೆ ತಿಳಿಸಲಾಗಿತ್ತು. ಆದರೆ, ಅಧ್ಯಕ್ಷರು ಈವರೆಗೆ ಒಪ್ಪಿಗೆ ಪಡೆದಿಲ್ಲ. ಪ್ರಮಾಣಪತ್ರದ ಬಗ್ಗೆ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರು ಸುಳ್ಳು ಮಾಹಿತಿ ನೀಡಿದ್ದಾರೆ. ಸಂಘದ ಒಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳ ಶೇ 50ರಷ್ಟು ಖರ್ಚನ್ನು ದೆಹಲಿಯ ಸ್ಥಳೀಯ ಕಲಾವಿದರಿಗೆ ನೀಡಬೇಕು ಎಂದು ಸಂಘದ ಸಂವಿಧಾನದಲ್ಲಿ ನಮೂದಿಸಲಾಗಿದೆ. ಈ ನಿಯಮಗಳನ್ನು ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಗಾಳಿಗೆ ತೂರಲಾಗಿದೆ’ ಎಂದು ಅವರು ಪತ್ರದಲ್ಲಿ ದೂರಿದ್ದಾರೆ. 

ದುರುಪಯೋಗವಾಗಿದ್ದರೆ ರಾಜೀನಾಮೆ: ನಾಗರಾಜ

‘ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ನಯಾಪೈಸೆ ದುರುಪಯೋಗವಾಗಿರುವುದನ್ನು ಸಾಬೀತುಪಡಿಸಿದರೆ ಅಂದೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಅಧ್ಯಕ್ಷ ಸಿ.ಎಂ. ನಾಗರಾಜ ಸವಾಲು ಎಸೆದಿದ್ದಾರೆ. 

‘ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಹಣ ದುರುಪಯೋಗ ಆಗಿಲ್ಲ. ಸಂಘದ ಸಭೆಯಲ್ಲಿ ಅನುಮೋದನೆ ಪಡೆದು ಹಣ ಖರ್ಚು ಮಾಡಲಾಗಿದೆ. ಈ ಬಗ್ಗೆ ಲೆಕ್ಕ ಪರಿಶೋಧಕರು ಪರಿಶೀಲನೆ ನಡೆದಿದ್ದಾರೆ. ಅಮೃತ ಮಹೋತ್ಸವದಲ್ಲಿ ಉಳಿದ ₹1.5 ಕೋಟಿಯನ್ನು ಸಂಘದ ಬ್ಯಾಂಕ್ ಖಾತೆಯಲ್ಲಿ ಇಡಲಾಗಿದೆ. ಅದನ್ನು ಸಂಘದ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು. ಕೆಲವರು ದುರುದ್ದೇಶದಿಂದ ದೂರು ನೀಡಿದ್ದಾರೆ’ ಎಂದು ಅವರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT