ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಗಿದ ‘ಅಮರ್‌ ರಹೇ ಪ್ರಾಂಜಲ್‌’ ಘೋಷಣೆ

ಜಿಗಣಿ ಮನೆ ತಲುಪಿದ ಪಾರ್ಥೀವ ಶರೀರ । ಅಂತಿಮ ದರ್ಶನಕ್ಕೆ ಸಿದ್ಧತೆ । 30 ಕಿ.ಮೀಟರ್‌ ಅಂತಿಮ ಯಾತ್ರೆ* ಮೊಂಬತ್ತಿ ನಮನ
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಆನೇಕಲ್: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ನಡೆದ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಪಾರ್ಥೀವ ಶರೀರವನ್ನು ದೆಹಲಿಯಿಂದ ಶುಕ್ರವಾರ ರಾತ್ರಿ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾಯಿತು. ಸಕಲ ಸೇನಾ ಗೌರವದೊಂದಿಗೆ ಪಾರ್ಥೀವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಪ್ರಾಂಜಲ್‌ ಮನೆಯ ಎದುರು ಶನಿವಾರ ಬೆಳಗ್ಗೆ 7ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕು ಆಡಳಿತವು 500 ಮಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದೆ. ಕುಟುಂಬದವರು, ಸಂಬಂಧಿಕರಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 

ಬೆಳಗ್ಗೆ 10ಕ್ಕೆ ಮನೆಯಿಂದ ಅಂತಿಮ ಯಾತ್ರೆ ಹೊರಡಲಿದೆ. ಜಿಗಣಿ ಓಟಿಸಿ ಸರ್ಕಲ್‌, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್‌ ರೋಡ್‌, ಕೋನಪ್ಪನ ಅಗ್ರಹಾರ ಸರ್ಕಲ್‌, ಕೂಡ್ಲುಗೇಟ್‌ ಮೂಲಕ ಸೋಮಸುಂದರ ಪಾಳ್ಯ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು.

ಅಂತಿಮ ಯಾತ್ರೆ ಸಾಗಲಿರುವ 30ಕಿ.ಮೀ. ರಸ್ತೆಯುದ್ದಕ್ಕೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ನಂದನವನ ಬಡಾವಣೆಯ ಮುಖ್ಯ ದ್ವಾರದ ಬಳಿ ಜಮಾಯಿಸಿದ್ದ ನೂರಾರು ಅಭಿಮಾನಿಗಳು ಅಗಲಿದ ವೀರಯೋಧನಿಗೆ ನಮನ ಸಲ್ಲಿಸಿದರು. ಮೊಂಬತ್ತಿ ಹಿಡಿದು ‘ಅಮರ್‌ ರಹೇ ಕ್ಯಾಪ್ಟನ್‌ ಪ್ರಾಂಜಲ್‌’ ಘೋಷಣೆ ಕೂಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ವೀರಯೋಧನ ಅಂತಿಮ ದರ್ಶನ ಪಡೆಯಲು ಆನೇಕಲ್‌ ಸುತ್ತಮುತ್ತಲ ಪ್ರದೇಶಗಳಿಂದ ಆಗಮಿಸುತ್ತಿರುವ ಜನರು ಮನೆಯ ಬಳಿ ಜಮಾಯಿದ್ದಾರೆ.

ಪ್ರಾಂಜಲ್‌ ಭಾವಚಿತ್ರಕ್ಕೆ ಅಲಂಕಾರ 
ಪ್ರಾಂಜಲ್‌ ಭಾವಚಿತ್ರಕ್ಕೆ ಅಲಂಕಾರ 
ಹುತಾತ್ಮ ಕ್ಯಾಪ್ಟನ್‌ ಪ್ರಾಂಜಲ್‌ ಅವರಿಗೆ ಅಭಿಮಾನಿಗಳು ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು

ಹುತಾತ್ಮ ಕ್ಯಾಪ್ಟನ್‌ ಪ್ರಾಂಜಲ್‌ ಅವರಿಗೆ ಅಭಿಮಾನಿಗಳು ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು

‘ಆಲ್‌ ಓಕೆ’ ಸಂದೇಶ ಕಳಿಸಿ ಪ್ರಾಣಬಿಟ್ಟ ಪ್ರಾಂಜಲ್  

‘ಐದು ದಿನದ ಹಿಂದೆ ಕರೆ ಮಾಡಿದ್ದ ಪ್ರಾಂಜಲ್‌ ಇಂಟೆಲಿಜೆನ್ಸ್‌ ಕಾರ್ಯವೊಂದರ ಮೇಲೆ ನಿಯೋಜನೆಗೊಂಡಿದ್ದೇನೆ. ನಿವೇನೂ ಕರೆ ಮಾಡಬೇಡಿ ನಾನೇ ಮೆಸೆಜ್‌ ಮಾಡುತ್ತೇನೆ ಅಥವಾ ಕರೆ ಮಾಡುತ್ತೇನೆ ಎಂದು ಹೇಳಿದ್ದ. ಆಲ್‌ ಓಕೆ ಎಂಬ ಸಂದೇಶ ಬರುತ್ತಿತ್ತು. ಆದರೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಆಲ್‌ ಓಕೆ ಎಂದು ಹೇಳುತ್ತಲೇ ಕೊನೆಯುಸಿರೆಳೆದಿದ್ದಾನೆ’ ಎಂದು ಹೇಳುತ್ತಾ ಪ್ರಾಂಜಲ್‌ ತಂದೆ ವೆಂಕಟೇಶ್‌ ಗದ್ಗದಿತರಾದರು. ‘ಸಿಇಟಿಯಲ್ಲಿ ಆರ್‌.ವಿ.ಕಾಲೇಜಿನಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಸೀಟು ದೊರೆತರೂ ಪ್ರಾಂಜಲ್‌ ಮಿಲಿಟರಿ ಆಯ್ಕೆ ಮಾಡಿಕೊಂಡಿದ್ದ. ಮೂರನೇ ತರಗತಿಯಿಂದಲೂ ಮಿಲಿಟರಿ ಸೇರುವ ಕನಸು ಕಂಡಿದ್ದ. ತನ್ನಾಸೆಯಂತೆಯೇ 2014ರ ಜೂನ್‌ನಲ್ಲಿ ಮಿಲಿಟರಿಗೆ ಸೇರಿದ್ದ’ ಎಂದು ಕಣ್ಣೀರಾದರು. ‘ಎರಡು ವರ್ಷದ ಹಿಂದೆ ಬೆಂಗಳೂರಿನ ಅದಿತಿಯನ್ನು ಮದುವೆಯಾಗಿದ್ದ. ಚೆನ್ನೈನ ಐಐಟಿಯಲ್ಲಿ ಅದಿತಿ ಪಿಎಚ್‌.ಡಿ ಮಾಡುತ್ತಿದ್ದಾಳೆ. ಒಬ್ಬ ಯೋಧನ ಪತ್ನಿಯಾಗಿ ಪತಿಗೆ ಸದಾ ನೈತಿಕ ಬೆಂಬಲ ನೀಡುತ್ತಿದ್ದಳು. ಪ್ರಾಂಜಲ್‌ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾನೆ ಎಂಬ ತೃಪ್ತಿ ನನಗಿದೆ. ದೇಶಕ್ಕಾಗಿ ಕುಟುಂಬವನ್ನೂ ಲೆಕ್ಕಿಸದೆ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಯೋಧರಿದ್ದಾರೆ. ಪ್ರಾಂಜಲ್‌ ಎಲ್ಲರಿಗೂ ಸ್ಫೂರ್ತಿಯಾಗಿದ್ದಾನೆ. ಆತಂಕವಾದಿಗಳನ್ನು ದಮನ ಮಾಡಬೇಕೆಂಬುದು ಪ್ರಾಂಜಲ್‌ನ ಗುರಿಯಾಗಿತ್ತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT