ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರಂತೆ ಪಶುಸಂಗೋಪನಾ ಇಲಾಖೆಯಿಂದ ‘ಪಶು ಸಖಿ’ಯರು: ಸಚಿವ ವೆಂಕಟೇಶ್

Published 22 ಸೆಪ್ಟೆಂಬರ್ 2023, 7:14 IST
Last Updated 22 ಸೆಪ್ಟೆಂಬರ್ 2023, 7:14 IST
ಅಕ್ಷರ ಗಾತ್ರ

ಮೈಸೂರು: ‘ಆರೋಗ್ಯ ಇಲಾಖೆಯಲ್ಲಿರುವ ಆಶಾ ಕಾರ್ಯಕರ್ತೆಯರ ರೀತಿ ನಮ್ಮ ಇಲಾಖೆಯಿಂದ ‘ಪಶು ಸಖಿ’ಯರನ್ನು (ಎ–ಹೆಲ್ಪ್‌) ನೇಮಿಸಿಕೊಳ್ಳಲಾಗಿದೆ’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್‌ ತಿಳಿಸಿದರು.

‘ಇಲಾಖೆ ಮತ್ತು ರೈತರ ನಡುವೆ ಇರುವ ಅಂತರವನ್ನು ತಗ್ಗಿಸಿ ಸೇತುವೆಯಾಗಿ ಕಾರ್ಯನಿರ್ವಹಿಸಲು ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಒಬ್ಬರಂತೆ ರಾಜ್ಯದಲ್ಲಿ ಒಟ್ಟು 5,962 ಪಶು ಸಖಿಯರನ್ನು ಆಯ್ಕೆ ಮಾಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

‘ಕನಿಷ್ಠ 8ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಕನಿಷ್ಠ 18 ದಿನಗಳ ಸಾಮಾನ್ಯ ತರಬೇತಿ ನಂತರ, ಜಾನುವಾರುಗಳ ವೈಜ್ಞಾನಿಕ ಸಾಕಣೆ ಹಾಗೂ ಪೋಷಣೆ, ರೋಗ ನಿಯಂತ್ರಣ ಕ್ರಮಗಳ ಬಗ್ಗೆ 16 ದಿನಗಳ ತರಬೇತಿ ನೀಡಲಾಗುವುದು. ಬಳಿಕ ಅವರನ್ನು ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಅವರಿಂದ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಪಶುಸಂಗೋಪನಾ ಚಟುವಟಿಕೆಗಳ ಸಮಗ್ರ ಮಾಹಿತ ಕೊಡಿಸುವುದು ಉದ್ದೇಶವಾಗಿದೆ. ಆಯಾ ಪಶು ವೈದ್ಯರ ಮಾರ್ಗದರ್ಶನದಲ್ಲಿ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡುತ್ತಾರೆ’ ಎಂದು ತಿಳಿಸಿದರು.

‘ಅವರಿಗೆ ಕೇಂದ್ರ ಸರ್ಕಾರದಿಂದ ತಿಂಗಳಿಗೆ ₹ 3,800 ಸಂಭಾವನೆ ನೀಡಲಾಗುತ್ತದೆ. ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ ನಮ್ಮ ರಾಜ್ಯ ಮುಂದಿದೆ’ ಎಂದು ಹೇಳಿದರು.

‘ಈ ತರಬೇತಿ ಕಾರ್ಯಕ್ರಮಕ್ಕೆ ಸೆ.26ರಂದು ಬೆಳಿಗ್ಗೆ 10.30ಕ್ಕೆ ತಾಲ್ಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ನೆರವೇರಿಸಲಿದ್ದಾರೆ. ಇದೇ ವೇಳೆ 4ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ. ಉತ್ತನಹಳ್ಳಿಯಲ್ಲಿ ನಿರ್ಮಿಸಿರುವ ನೂತನ ಪಶುಚಿಕಿತ್ಸಾಲಯದ ಉದ್ಘಾಟನೆಯೂ ನೆರವೇರಲಿದೆ’ ಎಂದು ಮಾಹಿತಿ ನೀಡಿದರು.

‘ಕಾಲು ಬಾಯಿ ಜ್ವರದ ಲಸಿಕೆ

‘ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಅನುಷ್ಠಾನದಲ್ಲೂ ನಮ್ಮ ರಾಜ್ಯ ಮುಂದಿದೆ. ನಾವು 4ನೇ ಹಂತಕ್ಕೆ ಬಂದಿದ್ದೇವೆ. ಇತರ ರಾಜ್ಯದವರು 2, 3ನೇ ಸುತ್ತಿನಲ್ಲೇ ಇದ್ದಾರೆ. ಸೆ.26ರಿಂದ ಅ.25ರವರೆಗೆ ಲಸಿಕೆ ಕಾರ್ಯಕ್ರಮ ನಡೆಯಲಿದೆ. 84.69 ಲಕ್ಷ ದನ, 29.84 ಲಕ್ಷ ಎಮ್ಮೆಗಳು ಒಳಗೊಂಡಂತೆ 4 ತಿಂಗಳು ಮೇಲಿನ ಎಲ್ಲ ದನ, ಎಮ್ಮೆ–ಕರುಗಳಿಗೆ ಲಸಿಕೆ ಹಾಕಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರವು 1.14 ಕೋಟಿ ಡೋಸ್ ಲಸಿಕೆ ಒದಗಿಸಿದೆ. ಉಚಿತವಾಗಿ ಲಸಿಕೆ ನೀಡಲಾಗುವುದು. ಇದಕ್ಕಾಗಿ 8,784 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಕೇರಳ ಮೊದಲಾದ ಜಿಲ್ಲೆಗಳಲ್ಲಿ ಆ ಜ್ವರ ಕಾಣಿಸಿಕೊಂಡಿರುವುದರಿಂದಾಗಿ ನಾವು ಮುಂಜಾಗ್ರತಾ ಕ್ರಮವಾಗಿ ಲಸಿಕೆ ನೀಡುತ್ತಿದ್ದೇವೆ’ ಎಂದು ವಿವರಿಸಿದರು.

‘ರಾಸುಗಳಲ್ಲಿ ಚರ್ಮ ಗಂಟು ರೋಗ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವಲ್ಲಿ ಅಲ್ಲಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದೆ. ಲಸಿಕೆ ನೀಡಲಾಗುತ್ತಿದೆ. 4 ಲಕ್ಷ ಡೋಸ್ ಲಸಿಕೆ ಲಭ್ಯವಿದೆ’ ಎಂದು ತಿಳಿಸಿದರು.

ಹೊರ ರಾಜ್ಯಗಳಿಗೆ ಮೇವು ಸಾಗಿಸದಂತೆ ಸೂಚನೆ

‘ರಾಜ್ಯದಲ್ಲಿ ನಮ್ಮ ಜಾನುವಾರುಗಳಿಗೆ ಮುಂದಿನ 28 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಅಲ್ಲದೇ, ರೈತರಿಗೆ ಮೇವಿನ ಬೆಳೆಯ ಬೀಜವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಕ್ಕಾಗಿ ₹ 20 ಕೋಟಿ ಹಣವೂ ಇದೆ. ಕೇಂದ್ರದಿಂದ ₹ 48 ಕೋಟಿ ನೀಡಿದ್ದಾರೆ’ ಎಂದು ಹೇಳಿದರು.

‘ತೀವ್ರ ಬರ ಇರುವುದರಿಂದಾಗಿ, ನಮ್ಮಲ್ಲಿನ ಮೇವನ್ನು ಹೊರ ರಾಜ್ಯಗಳಿಗೆ ಸಾಗಿಸದಂತೆ ಕ್ರಮ ಕೈಗೊಳ್ಳುವಂತೆ ಗಡಿ ಭಾಗದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ಮೇವು ಸಾಗಣೆ ನಿಷೇಧಿಸಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಪಶುಸಂಗೋಪನಾ ಇಲಾಖೆಯಲ್ಲಿ 18ಸಾವಿರ ಹುದ್ದೆಗಳು ಮಂಜೂರಾಗಿವೆ. ಆದರೆ, 9ಸಾವಿರ ಮಂದಿಯಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಬಹಳಷ್ಟಿದೆ. ಇರುವವರಿಂದಲೇ ನಿರ್ವಹಣೆ ಮಾಡಿಸಲಾಗುತ್ತಿದೆ. ಹೊಸದಾಗಿ 400 ಪಶು ವೈದ್ಯರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. 250 ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲೆಲ್ಲಿ ಬಹಳ ಅಗತ್ಯವಿದೆಯೋ ಅಲ್ಲಿಗೆ ಅವರನ್ನು ನಿಯೋಜಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ವಿಮೆ ಮಾಡದ ಎತ್ತು, ಎಮ್ಮೆ, ಹಸುಗಳು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ರಾಸುಗಳ ಮಾಲೀಕರಿಗೆ ₹ 10 ಸಾವಿರ, 6 ತಿಂಗಳ ಒಳಗಿನ ಕುರಿ/ ಮೇಕೆಗಳು ಸಾವಿಗೀಡಾದಲ್ಲಿ ತಲಾ ₹ 2,500 ಹಾಗೂ 6 ತಿಂಗಳಿಗಿಂತಲೂ ಹೆಚ್ಚು ವಯಸ್ಸಿನ ಕುರಿ/ಮೇಕೆ ಮರಣ ಹೊಂದಿದಲ್ಲಿ ತಲಾ ₹ 5ಸಾವಿರ ಪರಿಹಾರ ಧನವನ್ನು ಮಾಲೀಕರಿಗೆ ನೀಡಲಾಗುತ್ತದೆ. ಹಿಂದೆ ಬಾಕಿ ಇರುವ ಪ್ರಕರಣಗಳಲ್ಲೂ ಪರಿಹಾರ ಕೊಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹ 20 ಕೋಟಿ ಅನುದಾನ ಲಭ್ಯವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT