ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಭಾಗ್ಯ ಹತ್ತಿಕ್ಕಲು ಕೇಂದ್ರದ ಷಡ್ಯಂತ್ರ: ಸಿದ್ದರಾಮಯ್ಯ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ * ಪ್ರತಿಭಟನಾ ಪತ್ರ ಬರೆಯುವ ಎಚ್ಚರಿಕೆ
Published 14 ಜೂನ್ 2023, 20:12 IST
Last Updated 14 ಜೂನ್ 2023, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ ತಲಾ 5 ಕೆ.ಜಿ ಅಕ್ಕಿ ವಿತರಣೆಗಾಗಿ ತಿಂಗಳಿಗೆ 2.28 ಲಕ್ಷ ಟನ್‌ ಅಕ್ಕಿ ನೀಡಲು ಒಪ್ಪಿದ್ದ ಭಾರತೀಯ ಆಹಾರ ನಿಗಮ ಈಗ ಹಿಂದೇಟು ಹಾಕಿದೆ. ಇದಕ್ಕೆ ಬಿಜೆಪಿಯ ಬಡವರ ವಿರೋಧಿ ಧೋರಣೆಯೇ ಕಾರಣ. ಈ ಸಂಬಂಧ ಕೇಂದ್ರಕ್ಕೆ ಪ್ರತಿಭಟನಾ ಪತ್ರ ಬರೆಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಗಮವು 7 ಲಕ್ಷ ಟನ್‌ ಅಕ್ಕಿ ಇಟ್ಟುಕೊಂಡು ಕೊಡುವುದಿಲ್ಲ ಎನ್ನುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರುತ್ತದೆ. ಬಡವರ ಕಲ್ಯಾಣ ಆಗುತ್ತದೆ. ಅದನ್ನು ತಪ್ಪಿಸಬೇಕು ಎಂದೇ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ’ ಎಂದು ದೂರಿದರು.

‘ಭಾರತೀಯ ಆಹಾರ ನಿಗಮ ಅಕ್ಕಿ ಕೊಡುವುದಾಗಿ ತಿಳಿಸಿದ್ದರಿಂದ ನಾವು ಜುಲೈ 1 ರಿಂದಲೇ ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಈಗ ಕೊಡುವುದಿಲ್ಲ ಎನ್ನುತ್ತಿದೆ. ಬೇರೆ ರಾಜ್ಯಗಳಿಂದ ಖರೀದಿಸಬೇಕಾಗಿದೆ. ತಮ್ಮ ಬಳಿ ಅಕ್ಕಿ ಇಲ್ಲ ಎಂದು ಪಂಜಾಬ್‌ ಹೇಳಿದೆ. ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನೋಡೋಣ ಎಂದಿದ್ದಾರೆ. ಆ ರಾಜ್ಯಗಳ ಜತೆ ಮಾತುಕತೆಗೆ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಅಲ್ಲಿಗೆ ತೆರಳಲಿದ್ದಾರೆ’ ಎಂದರು.

‘ಹೆಚ್ಚುವರಿ 5 ಕೆ.ಜಿ ಅಕ್ಕಿ ನೀಡುವ ಯೋಜನೆ ಪ್ರಕಟಿಸಿದ ಬಳಿಕ ಭಾರತೀಯ ಆಹಾರ ನಿಗಮಕ್ಕೆ ನಮ್ಮ ಅಧಿಕಾರಿಗಳು ಪತ್ರ ಬರೆದರು. ಅದಕ್ಕೆ ಪ್ರತಿಕ್ರಿಯಿಸಿದ ನಿಗಮ ಅಧಿಕಾರಿಗಳು ನಿಗಮದ ಬಳಿ ಅಕ್ಕಿ ಇದೆ. 2.8 ಲಕ್ಷ ಟನ್‌ ಅಕ್ಕಿ ಕೊಡಲು ಅಭ್ಯಂತರವಿಲ್ಲ ಎಂದು ಹೇಳಿದ್ದರು. ಪ್ರತಿ ಕ್ವಿಂಟಲ್‌ಗೆ ₹3,400 ರಂತೆ, ಎಲೆಕ್ಟ್ರಾನಿಕ್‌ ಹರಾಜಿನಲ್ಲಿ ಭಾಗವಹಿಸದೇ ಪಡೆದುಕೊಳ್ಳಬಹುದು ಎಂದೂ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದರು. ಆ ಬಳಿಕ ಇನ್ನೊಂದು ಪತ್ರ ಬರೆದು 13,189.45  ಟನ್‌ ಅಕ್ಕಿ ಕೊಡುವುದಾಗಿಯೂ ಹೇಳಿದ್ದರು‘ ಎಂದು ಸಿದ್ದರಾಮಯ್ಯ ವಿವರಿಸಿದರು.

ಕೇಂದ್ರ ರಾಜ್ಯಗಳಿಗೆ ಬರೆದ ಪತ್ರವೇನು?

ಜೂನ್‌ 13 ರಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪತ್ರವೊಂದನ್ನು ಬರೆದಿತ್ತು. ಅದರಲ್ಲಿ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳು ಹೆಚ್ಚುವರಿ ಅಕ್ಕಿ ಮತ್ತು ಗೋಧಿಯನ್ನು ‘ಮುಕ್ತ ಮಾರುಕಟ್ಟೆಯ ಮಾರಾಟ ಯೋಜನೆ’ಯಡಿ (ಒಎಂಎಸ್‌ಎಸ್‌ಡಿ) ಖರೀದಿಸಲು ಅವಕಾಶ ಇಲ್ಲ’ ಎಂದುತಿಳಿಸಿತ್ತು. ಈ ಪತ್ರವನ್ನು ಸಿದ್ದರಾಮಯ್ಯ ಪ್ರದರ್ಶಿಸಿದರು.

‘ಅಕ್ಕಿ ಸ್ಥಗಿತ: ಯಾವುದೇ ರಾಜಕೀಯ ಇಲ್ಲ’

ನವದೆಹಲಿ: ಕೇಂದ್ರ ಸರ್ಕಾರವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮತ್ತು ಗೋಧಿಯ ಮಾರಾಟ ಸ್ಥಗಿತಗೊಳಿಸಲು ಮುಂಗಾರು ವಿಳಂಬ ಕಾರಣ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹಣದುಬ್ಬರ ಪ್ರವೃತ್ತಿ ನಿಯಂತ್ರಿಸಲು, ಗೋಧಿ ಹಾಗೂ ಅಕ್ಕಿಯ ಏರುತ್ತಿರುವ ಬೆಲೆಯನ್ನು ನಿಯಂತ್ರಿಸಲು ಸಹ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಕೆಲವು ರಾಜ್ಯಗಳಲ್ಲಿ ಈಗಷ್ಟೇ ಮುಂಗಾರು ಪ್ರವೇಶವಾಗಿದೆ. ಇದರಿಂದಾಗಿ, ಅಕ್ಕಿ ಉತ್ಪಾದಿಸುವ ರಾಜ್ಯಗಳಲ್ಲಿ ಭತ್ತ ಬಿತ್ತನೆ ವಿಳಂಬವಾಗಿದೆ. ದೇಶದ ಒಟ್ಟು ಅಕ್ಕಿ ಉತ್ಪಾದನೆಯ ಶೇ 80ರಷ್ಟನ್ನು ಮುಂಗಾರು ಹಂಗಾಮಿನಲ್ಲೇ ಬೆಳೆಯಲಾಗುತ್ತದೆ. ದಕ್ಷಿಣದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಬಿತ್ತನೆ ಆರಂಭವಾಗಬೇಕಿತ್ತು. ಮಳೆ ಬಾರದ ಕಾರಣ ಇನ್ನೂ ಈ ಕಾರ್ಯ ಆರಂಭವಾಗಿಲ್ಲ. ಉತ್ತರದ ರಾಜ್ಯಗಳಲ್ಲಿ ಮುಂದಿನ ತಿಂಗಳಿಂದ ಬಿತ್ತನೆ ಆರಂಭವಾಗಲಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ‘ಈ ವರ್ಷ ಮುಂಗಾರು ಕುಂಠಿತಗೊಂಡರೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ರಾಜ್ಯಗಳಿಗೆ ವಿತರಿಸಲು ಅಕ್ಕಿ ದಾಸ್ತಾನು ಮಾಡುವ ಅಗತ್ಯ ಅಗತ್ಯವಿದೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ, ರಾಜ್ಯಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟ ಸ್ಥಗಿತಗೊಳಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು. ಈಶಾನ್ಯದ ರಾಜ್ಯಗಳಿಗೆ ಹೊರತುಪಡಿಸಿ ಎಲ್ಲ ರಾಜ್ಯಗಳಿಗೆ ಆಹಾರ ಧಾನ್ಯಗಳ ಮಾರಾಟ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ 

ಅಕ್ಕಿ ಸಿಗದಿದ್ದರೆ ಬಡವರ ಖಾತೆಗೆ ಹಣ ಹಾಕಿ: ಸಿ.ಟಿ.ರವಿ

‘ಸಿದ್ದರಾಮಯ್ಯ ಅವರೇ ನಿಮ್ಮ ಪ್ರಣಾಳಿಕೆ ಪ್ರಕಾರ ನೀವು ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ನೀಡಲೇಬೇಕು. ಅಕ್ಕಿ ಹೊಂದಿಸಲು ಸಾಧ್ಯವಾಗದಿದ್ದರೆ ಅಲ್ಲಿಯವರೆಗೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿಯ ಮಾರುಕಟ್ಟೆ ದರದ ಮೊತ್ತವನ್ನು ಬಡವರ ಖಾತೆಗೆ ಜಮೆ ಮಾಡಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  ಒತ್ತಾಯಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ರಾಜ್ಯದ ಪ್ರತಿಯೊಬ್ಬ ಬಡವರಿಗೂ ಪ್ರತಿ ತಿಂಗಳು ಐದು ಕೆ.ಜಿ.ಅಕ್ಕಿ ಕೊಡುತ್ತಿರುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ’ ಎಂದು ಹೇಳಿದ್ದಾರೆ.

ಕೀಳು ರಾಜಕಾರಣ ನಿಲ್ಲಿಸಿ: ಸುನಿಲ್

‘ಹೆಚ್ಚುವರಿ ಐದು ಕೆ.ಜಿ.ಅಕ್ಕಿ ಕೊಡುತ್ತೇವೆ ಎನ್ನುವುದು ನಿಮ್ಮ ವಾಗ್ದಾನ. ಅದರಂತೆ ನಡೆದುಕೊಳ್ಳಿ. ಅಂಗಳ ಡೊಂಕು ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕೀಳು ರಾಜಕಾರಣ ನಿಲ್ಲಿಸಿ’ ಎಂದು ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

‘ನುಡಿದಂತೆ ನಡೆಯುತ್ತೇವೆ ಎಂದು ಪುಗಸಟ್ಟೆ ಪ್ರಚಾರ ತೆಗೆದುಕೊಂಡು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಾ? ನೀವು ಮತ ರಾಜಕಾರಣಕ್ಕಾಗಿ ಪ್ರಣಾಳಿಕೆ ಸಿದ್ಧಪಡಿಸುವಾಗ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದೀರಾ’ ಎಂದೂ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ವೈಫಲ್ಯ: ವಿಜಯೇಂದ್ರ

‘ಅಕ್ಕಿ ಯೋಜನೆ ಜಾರಿಗೆ ತರುವಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ನಿಮ್ಮ ಸರ್ಕಾರದ ವೈಫಲ್ಯ ಅನಾವರಣಗೊಳ್ಳುವ ಆತಂಕದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ನಿಮ್ಮ ದಿಕ್ಕು ತಪ್ಪಿಸುವ ತಂತ್ರ ಅರ್ಥ ಮಾಡಿಕೊಳ್ಳದೇ ಇರುವಷ್ಟು ನಮ್ಮ ಜನ ಮುಗ್ದರಲ್ಲ’ ಎಂದು ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

‘ಉಚಿತ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಅಕ್ಕಿ ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದೀರಿ. ಈ ಹಿಂದೆಯೂ ನಿಮ್ಮ ಆಡಳಿತದ ಅವಧಿಯಲ್ಲಿ ಕೇಂದ್ರದಿಂದ ಅಕ್ಕಿ ತರಿಸಿಕೊಂಡು ಅನ್ನರಾಮಯ್ಯ ಎಂದು ಕರೆಸಿಕೊಂಡಿರಿ. ಅಪ್ಪಿತಪ್ಪಿಯೂ ಕೇಂದ್ರ ಸರ್ಕಾರದ ಕೊಡುಗೆ ಕುರಿತು ಎಲ್ಲೂ ಉಲ್ಲೇಖಿಸುವ ಔದಾರ್ಯವನ್ನು ತೋರಿಸಲೇ ಎಲ್ಲ’ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT