ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಎಂಟು ನದಿಗಳಲ್ಲಿ ಅಟಲ್ ಅಸ್ಥಿ ವಿಸರ್ಜನೆ

Last Updated 21 ಆಗಸ್ಟ್ 2018, 12:58 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಪ್ರಮುಖರ ಸಭೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬುಧವಾರ ಬೆಳಿಗ್ಗೆ 9.30ಕ್ಕೆ ಕರೆದಿದ್ದಾರೆ. ಅಲ್ಲಿ ನಮಗೆ ಅಟಲ್‌ ಅಸ್ಥಿಯನ್ನು ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಶಾಸಕ ಆರ್.ಅಶೋಕ ನೇತೃತ್ವದಲ್ಲಿ ಅಸ್ಥಿ ಕಳಶ ಸ್ವಾಗತಿಸುತ್ತಾರೆ. ಅದನ್ನು ಮೆರವಣಿಗೆ ಮೂಲಕ ಬಿಜೆಪಿ ಕಾರ್ಯಾಲಯಕ್ಕೆ ತರಲಾಗುತ್ತದೆ. ಕಾರ್ಯಾಲಯದ ಮುಂಭಾಗದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

23ರಂದು ಬೆಳಿಗ್ಗೆ 9.30ಕ್ಕೆ ಮೆರವಣಿಗೆ ಮೂಲಕ ಹೊರಟು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜಿಸಲಾಗುತ್ತದೆ. ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಶಾಸಕರಾದ ಆರ್.ಅಶೋಕ, ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್‌ ಸಿಂಹ ಭಾಗವಹಿಸುವರು.

25ರಂದು ಏಳು ಕಡೆಗಳಲ್ಲಿ ಅಸ್ಥಿ ವಿಸರ್ಜನಾ ಕಾರ್ಯಕ್ರಮಗಳು ನಡೆಯಲಿವೆ.

*ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ: ನೇತ್ರಾವತಿ ನದಿಯಲ್ಲಿ. ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಸಿ.ಟಿ.ರವಿ ಭಾಗಿ.

*ಹುಬ್ಬಳ್ಳಿ–ಧಾರವಾಡ, ಗದಗ, ಹಾವೇರಿ ಜಿಲ್ಲೆ: ಮಲಪ್ರಭಾ ನದಿಯಲ್ಲಿ. ಶಾಸಕರಾದ ಜಗದೀಶ ಶೆಟ್ಟರ್‌, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಷಿ ಭಾಗಿ.

*ವಿಜಯಪುರ, ಬಾಗಲಕೋಟೆ ಜಿಲ್ಲೆ: ಕೃಷ್ಣಾ ನದಿಯಲ್ಲಿ. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದ ಪಿ.ಸಿ.ಗದ್ದಿಗೌಡರ್, ಶಾಸಕ ಗೋವಿಂದ ಕಾರಜೋಳ ಉಪಸ್ಥಿತಿ.

*ಬೀದರ್‌, ಕಲಬುರ್ಗಿ ಜಿಲ್ಲೆ: ಕಾರಂಜಾ ನದಿಯಲ್ಲಿ. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಭಗವಂತ ಖೂಬಾ ಉಪಸ್ಥಿತಿ.

*ಬಳ್ಳಾರಿ, ಕೊಪ್ಪಳ ಜಿಲ್ಲೆ: ತುಂಗಾಭದ್ರ ನದಿಯಲ್ಲಿ. ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ ಉಪಸ್ಥಿತಿ.

*ಉತ್ತರ ಕನ್ನಡ ಜಿಲ್ಲೆ: ಶರಾವತಿ ನದಿಯಲ್ಲಿ. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತಿ.

*ಶಿವಮೊಗ್ಗ ಜಿಲ್ಲೆ: ತುಂಗಾ ನದಿಯಲ್ಲಿ. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಮುಖಂಡ ಬಿ.ವೈ. ರಾಘವೇಂದ್ರ ಉಪಸ್ಥಿತಿ.

ಅಟಲ್‌ ಶ್ರದ್ಧಾಂಜಲಿ ಕಾರ್ಯಕ್ರಮ ಇದೇ 26ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT