ಬೆಂಗಳೂರು: ‘ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ ಹಾಗೂ ಅವರ ಕುಟುಂಬದ ಇತರೆ ಐವರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಆರೋಪದ ಕ್ರಿಮಿನಲ್ ಪ್ರಕರಣದಲ್ಲಿ, ಪ್ರಕರಣದ ತನಿಖಾಧಿಕಾರಿಯನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸದೆ ಪಾಟಿ ಸವಾಲಿನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿ ರಾಜ್ಯ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ, ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿರುವ ಹಿರಿಯ ವಕೀಲ ಎಂ.ಎಸ್.ಶ್ಯಾಮ್‌ಸುಂದರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.
ಸರ್ಕಾರದ ಪರ ವಿಶೇಷ ಪ್ರಾಸಿಕ್ಯೂಟರ್ ಎಂಬ ಪ್ರತಿಪಾದನೆಯೊಂದಿಗೆ ಶ್ಯಾಮ್‌ಸುಂದರ್ ಅವರು, ಸಿಟಿ ಸಿವಿಲ್ ಕೋರ್ಟ್‌ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಎಂ.ಎಸ್.ಶ್ಯಾಮ್‌ಸುಂದರ್, ‘ಈ ಪ್ರಕರಣದಲ್ಲಿ ದೂರಿಗೂ ಮತ್ತು ತನಿಖಾಧಿಕಾರಿ ಸಲ್ಲಿಸಿರುವ ದೋಷಾರೋಪಣ ಪಟ್ಟಿಗೂ ಯಾವುದೇ ಹೋಲಿಕೆ ಇಲ್ಲ. ತನಿಖಾಧಿಕಾರಿಯು, ದೂರಿನಲ್ಲಿ ಉಲ್ಲೇಖಿಸಿದ್ದ ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟು ಬೇರೊಬ್ಬ ಆರೋಪಿಯ ಪರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಇದೇ ತನಿಖಾಧಿಕಾರಿ ಸಾಕ್ಷಿ ಕಟ್ಟೆಯಲ್ಲಿಯೂ ಇದೇ ಅಂಶವನ್ನು ನುಡಿದಿರುತ್ತಾರೆ. ಆದರೆ, ದೂರಿನಲ್ಲಿ ನಮೂದಿಸಿರುವ ಆರೋಪಿಗಳ ಬಗ್ಗೆ ನುಡಿಯದೆ ಇರುವುದರಿಂದ ದೂರುದಾರನ ಪ್ರಕರಣಕ್ಕೆ ಧಕ್ಕೆ ಉಂಟಾಗಬಹುದು. ಆದ್ದರಿಂದ, ತನಿಖಾಧಿಕಾರಿಯನ್ನು ಕೇವಲ ಪ್ರತಿಕೂಲ ಸಾಕ್ಷಿ ಎಂದು ಮಾತ್ರವೇ ಪರಿಗಣಿಸದೆ, ಪಾಟಿ ಸವಾಲಿನಲ್ಲಿ ಕೇಳಬಹುದಾದ ಎಲ್ಲ ಪ್ರಶ್ನೆಗಳನ್ನು ಕೇಳುವುದಕ್ಕೆ ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದ್ದರು.
ಈ ವಾದವನ್ನು ಅಲ್ಲಗಳೆದಿದ್ದ ಆರೋಪಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ‘ವಿಶೇಷ ಪ್ರಾಸಿಕ್ಯೂಟರ್ ಎಂಬ ನೇಮಕಾತಿಯು ಶ್ಯಾಮ್‌ಸುಂದರ್ ಅವರಿಗೆ ಕೇವಲ ಸೆಷನ್ಸ್ ನ್ಯಾಯಾಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅವರು ಹೈಕೋರ್ಟ್‌ನಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ದೂರುದಾರರನ್ನು ಪ್ರತಿನಿಧಿಸಲು ಅರ್ಹತೆಯಿರುವುದಿಲ್ಲ. ಅಂತೆಯೇ, ಇಂತಹ ಅರ್ಜಿಯನ್ನು ಸಲ್ಲಿಸುವ ಮೊದಲು ಸಂಬಂಧಿಸಿದ ಇಲಾಖೆಯಿಂದ ಯಾವುದೇ ಆದೇಶ ಅಥವಾ ಅನುಮತಿಯನ್ನೂ ಪಡೆದಿರುವುದಿಲ್ಲ’ ಎಂದು ಪ್ರತಿಪಾದಿಸಿದ್ದರು.
ಹನುಮಂತರಾಯ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಶ್ಯಾಮ್‌ಸುಂದರ್ ಅವರು ವಿಶೇಷ ಪ್ರಾಸಿಕ್ಯೂಟರ್ ಆಗಿ ಹೈಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಲು ಯಾವುದೇ ಅರ್ಹತೆ ಹೊಂದಿರುವುದಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಪ್ರಾಸಿಕ್ಯೂಷನ್ ಅರ್ಜಿ ವಜಾಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.