ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಿನ ಕೊರತೆ–ತಾಪಮಾನ ಹೆಚ್ಚಳ | ಅಯ್ಯನಕೆರೆ ಖಾಲಿ: ಮೀನುಗಳ ಮಾರಣಹೋಮ

ತೂಬು ದುರಸ್ತಿಗಾಗಿ ನೀರು ಖಾಲಿ
Published 1 ಮೇ 2024, 23:44 IST
Last Updated 1 ಮೇ 2024, 23:44 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಐತಿಹಾಸಿಕ ಅಯ್ಯನಕೆರೆಯಲ್ಲಿ ತೂಬು ದುರಸ್ತಿಗೆಂದು ನೀರು ಖಾಲಿ ಮಾಡಲಾಗಿದ್ದು, ನೀರಿನ ಕೊರತೆ ಮತ್ತು ತಾಪಮಾನ ಹೆಚ್ಚಳದಿಂದ ಮೀನುಗಳ ಮಾರಣಹೋಮವೇ ನಡೆದಿದೆ.

‌420 ಎಂಸಿಎಫ್‌ಟಿ (ಮಿಲಿಯನ್ ಕ್ಯುಬಿಕ್ ಮೀಟರ್) ಸಾಮರ್ಥ್ಯದ ಕೆರೆಯ ನೀರು ಬಹುತೇಕ ಖಾಲಿಯಾಗಿದೆ. ಬರಗಾಲದಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಈ ಸ್ಥಿತಿಗೆ ಒಂದು ಕಾರಣವಾದರೆ, ತೂಬು ರಿಪೇರಿ ಕಾರ್ಯಕ್ಕೆಂದು ನೀರು ಖಾಲಿ ಮಾಡಿರುವುದು ಇನ್ನೊಂದು ಕಾರಣವಾಗಿದೆ.

ಈ ಕೆರೆಯಿಂದ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸಲಾಗುತ್ತದೆ. ಅಲ್ಲದೇ ಸಮೀಪದ ಸಖಾರಾಯಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಬಳಕೆ ಮಾಡಿಕೊಳ್ಳಲಾಗುತ್ತದೆ. ಮಳೆಗಾಲದಲ್ಲಿ ಒಮ್ಮೆ ಕೆರೆ ಭರ್ತಿಯಾಗಿದ್ದು, ನಂತರ ಮಳೆ ಕೊರತೆಯಾಗಿದ್ದರಿಂದ ನೀರಿನ ಹರಿವು ಕಡಿಮೆಯಾಯಿತು.

ಕೆರೆ ಏರಿಯ ಮಧ್ಯದಲ್ಲಿರುವ ವೀಕ್ಷಣಾ ಗೋಪುರದ ಕೆಳಗೆ ಅಳವಡಿಸಲಾಗಿರುವ ತೂಬಿನ ದುರಸ್ತಿ ಕಾರ್ಯ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದ ನೀರನ್ನೂ ಖಾಲಿ ಮಾಡಿದ್ದಾರೆ. ತೂಬಿನ ಕೊಂತ ಮುರಿದಿದ್ದು, ಅದನ್ನು ನೀರಿನಿಂದ ಮೇಲೆತ್ತಲು ಅಧಿಕಾರಿಗಳು ಹಲವು ರೀತಿಯ ಸಾಹಸ ಮಾಡಿದ್ದಾರೆ.

ಕೊಂತ ಮುರಿದಿದ್ದರಿಂದ ಮೇಲೆತ್ತುವ ಸರಳು ಮತ್ತು ಕೊಂತದ ಸಂಪರ್ಕ ಕಡಿತವಾಗಿದೆ. ಕೊಂತ ಮೇಲೆತ್ತದಿದ್ದರೆ ತೂಬಿನಿಂದ ನೀರು ಹೋರಕ್ಕೆ ಹೋಗುವುದಿಲ್ಲ. ಮಳೆಗಾಲಕ್ಕೂ ಮುನ್ನ ಈ ಕಾಮಗಾರಿ ಕೈಗೊಳ್ಳದಿದ್ದರೆ ಇಡೀ ವರ್ಷ ತೂಬಿನಿಂದ ನೀರು ಹರಿಸುವುದೇ ಕಷ್ಟವಾಗುತ್ತಿತ್ತು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಚಾಲ್ತಿಯಲ್ಲಿದ್ದ ಒಂದು ಕೊಂತದಿಂದ ನೀರು ಖಾಲಿ ಮಾಡಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ನೀರು ಖಾಲಿ ಮಾಡಿದ್ದರಿಂದ ಮೀನುಗಳ ಮಾರಣ ಹೋಮ ನಡೆದಿದೆ. ಕೆರೆಗಳಲ್ಲಿದ್ದ 8 ಲಕ್ಷಕ್ಕೂ ಹೆಚ್ಚು ಮೀನುಗಳಲ್ಲಿ ಬಹುತೇಕವು ಈಗ ಮೃತಪಟ್ಟಿವೆ. ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸತ್ತಿರುವುದರಿಂದ ಕೆರೆಯ ಸುತ್ತ ದುರ್ವಾಸನೆ ಹಬ್ಬಿದೆ. ಅಳಿದುಳಿದ ಮೀನುಗಳನ್ನು ಹಿಡಿಯುವ ಕಾರ್ಯ ಆರಂಭವಾಗಿದೆ. ಒಂದು ವಾರ ಮೀನು ಹಿಡಿಯಲಾಗಿದ್ದು, ವಾರದಲ್ಲೇ ಮೀನುಗಾರರಿಗೆ ಬೇಟೆ ಕಡಿಮೆಯಾಗಿದೆ. ಆದ್ದರಿಂದ ಅವರು ಕೂಡ ಗಂಟುಮೂಟೆ ಕಟ್ಟಿದ್ದಾರೆ.

‘ಮೀನುಗಳು ಸತ್ತಿರುವುದರಿಂದ ಬಲೆಗೆ ಮೀನು ಇಲ್ಲವಾಗಿವೆ. ಸತ್ತಿರುವ ಮೀನು ಹಿಡಿದು ಏನು ಮಾಡುವುದು’ ಎಂದು ಮೀನುಗಾರರು ಪ್ರಶ್ನಿಸುತ್ತಾರೆ.

ಮೀನುಗಳ ಮಾರಣ ಹೋಮದ ಬಳಿಕ ಅಳಿದು ಉಳಿದಿರುವ ಮೀನುಗಳನ್ನು ಹಿಡಿದು ಒಣಗಿಸಲು ಹಾಕಿರುವುದು
ಮೀನುಗಳ ಮಾರಣ ಹೋಮದ ಬಳಿಕ ಅಳಿದು ಉಳಿದಿರುವ ಮೀನುಗಳನ್ನು ಹಿಡಿದು ಒಣಗಿಸಲು ಹಾಕಿರುವುದು
ಅಯ್ಯನಕೆರೆಯಲ್ಲಿ ಮೀನುಗಳು ಸತ್ತು ದಡ ಸೇರಿರುವುದು
ಅಯ್ಯನಕೆರೆಯಲ್ಲಿ ಮೀನುಗಳು ಸತ್ತು ದಡ ಸೇರಿರುವುದು

‘ನೀರಿನ ಕೊರತೆ; ಶುಂಠಿ ಔಷಧಿ ಕಾರಣ’

‘ಮೀನು ಸಾಕಾಣಿಕೆ ಗುತ್ತಿಗೆ ಪಡೆದಿದ್ದವರ ಮಾಹಿತಿ ಪ್ರಕಾರ 8 ಲಕ್ಷ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಗಿತ್ತು. ತಾಪಮಾನ ಹೆಚ್ಚಳ ಮತ್ತು ನೀರಿನ ಕೊರತೆ ಮೀನುಗಳ ಸಾವಿಗೆ ಕಾರಣ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು. ‘ಕಳೆದ ವಾರ ಒಂದೆರಡ ಬಾರಿ ಮಳೆಯಾಗಿದ್ದು ಸುತ್ತಮುತ್ತಲ ಶುಂಠಿ ಹೊಲಗಳಿಂದ ನೀರು ಕೆರೆ ಸೇರಿದೆ. ಶುಂಠಿಗೆ ಬಳಸಿದ್ದ ಕಳೆನಾಶಕ ಔಷಧಿಯೂ ಕೆರೆ ಸೇರಿಕೊಂಡಿದೆ. ನೀರು ಕಡಿಮೆ ಇದ್ದಿದ್ದರಿಂದ ಮೀನುಗಳಿಗೆ ಉಸಿರಾಟದ ತೊಂದರೆ ಆಗಿರಬಹುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT