ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಬಲೇಶ್ವರ, ತಿಕೋಟಾಕ್ಕೆ ಕುಡಿಯುವ ನೀರು ಯೋಜನೆ ಪರಿಷ್ಕರಣೆ: ಎಂ.ಬಿ. ಪಾಟೀಲ

‘ಪ್ರತಿದಿನ ತಲಾ 135 ಲೀಟರ್ ನೀರು ಪೂರೈಕೆ ಗುರಿ’
Published 10 ಆಗಸ್ಟ್ 2023, 16:16 IST
Last Updated 10 ಆಗಸ್ಟ್ 2023, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಪ್ರತಿಯೊಬ್ಬರಿಗೂ ದಿನಕ್ಕೆ 135 ಲೀಟರ್ ನೀರು ಪೂರೈಸುವ ರೀತಿಯಲ್ಲಿ ಯೋಜನೆಗಳನ್ನು ಪರಿಷ್ಕರಿಸಿ, ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ವಿಜಯಪುರ ನಗರ ಮತ್ತು ಬಬಲೇಶ್ವರ, ತಿಕೋಟಾ ಪಟ್ಟಣಗಳ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಗುರುವಾರ ಅವರು ಸಭೆ ನಡೆಸಿದರು.

ಬಳಿಕ ಮಾತನಾಡಿದ ಸಚಿವರು, ‘ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಮೊದಲು ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್‌ ನೀರು ಒದಗಿಸುವ ಮಾನದಂಡಕ್ಕೆ ಅನುಗುಣವಾಗಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆ ಮಂಜೂರಾಗಿತ್ತು. ಈ ಯೋಜನೆಗೆ ₹ 82 ಕೋಟಿ ಒದಗಿಸಲಾಗಿತ್ತು. ಆದರೆ, ಈಗ ಎರಡೂ ಊರುಗಳು ಪಟ್ಟಣ ಪಂಚಾಯಿತಿಗಳಾಗಿವೆ. ಹೀಗಾಗಿ, ನಗರ, ಪಟ್ಟಣ ಕುಡಿಯುವ ನೀರು ಪೂರೈಕೆ ಯೋಜನೆಯಂತೆ ಯೋಜನೆಗಳ ಮರುವಿನ್ಯಾಸ ಮಾಡಿ, ಇನ್ನು ಮುಂದೆ 24X7 ನೀರು ಪೂರೈಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದರು.

‘ವಿಜಯಪುರ ನಗರಕ್ಕೆ ಕೊಲ್ಹಾರದಿಂದ ನೀರು ಪೂರೈಕೆಯಾಗುವ 10.74 ಕಿ.ಮೀ. ಉದ್ದದ ಕಾಂಕ್ರಿಟ್‌ ಕೊಳವೆಗಳಲ್ಲಿ ಸೋರಿಕೆ ಕಂಡುಬರುತ್ತಿದೆ. ಆದ್ದರಿಂದ ಇಲ್ಲಿ ಉತ್ಕೃಷ್ಟ ದರ್ಜೆಯ ಎಂಎಸ್‌ ಪೈಪ್‌ ಅಳವಡಿಸಬೇಕು. 2018ರಲ್ಲಿ ಇದಕ್ಕೆ ₹ 32 ಕೋಟಿ ಮಂಜೂರಾಗಿದ್ದರೂ ಟೆಂಡರ್‌ ರದ್ದಾಗಿತ್ತು. ಈಗ ಇದನ್ನು ಪರಿಷ್ಕರಿಸಿದ್ದು, ₹ 52 ಕೋಟಿ ಅಂದಾಜು ವೆಚ್ಚವಾಗಲಿದೆ ಎಂದು ನಿರ್ಧರಿಸಲಾಗಿದೆ. ಈ ವಿಷಯವನ್ನು ತ್ವರಿತವಾಗಿ ಸಚಿವ ಸಂಪುಟದ ಮುಂದೆ ಮಂಡಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ವಿಜಯಪುರ ನಗರಕ್ಕೆ 90 ಕಿ.ಮೀ. ದೂರದ ಆಲಮಟ್ಟಿ ಅಣೆಕಟ್ಟೆಯಿಂದ ನೀರು ಪೂರೈಸಲಾಗುತ್ತಿದೆ. ಇಲ್ಲಿಗೆ ಮುಂದಿನ 50 ವರ್ಷಗಳ ಅಗತ್ಯವನ್ನು ಮನಗಂಡು, ದೂರದೃಷ್ಟಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಬೇಕಾಗಿದೆ. ಇವೆಲ್ಲವನ್ನೂ ನಗರಾಭಿವೃದ್ಧಿ ಇಲಾಖೆ ಒಪ್ಪಿಕೊಂಡಿದ್ದು, ತ್ವರಿತ ಕ್ರಮ ಕೈಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ವಿಜಯಪುರ ನಗರದಲ್ಲಿ ಸುಗಮ ಓಡಾಟ ಮತ್ತು ಸುರಕ್ಷತೆ ಹಾಗೂ ವಿದ್ಯುತ್‌ ಉಳಿತಾಯದ ದೃಷ್ಟಿಯಿಂದ ಎಲ್‌ಇಡಿ ದೀಪಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಈ‌ ಸಂಬಂಧ ಟೆಂಡರ್‌ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಬೇಕು’ ಎಂದು ಪಾಟೀಲ ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಆಯುಕ್ತ ಶರತ್, ಗ್ರಾಮೀಣ ಕುಡಿಯುವ ನೀರು ಯೋಜನೆ ಆಯುಕ್ತ ನಾಗೇಂದ್ರ ಪ್ರಸಾದ್, ಮುಖ್ಯ ಎಂಜಿನಿಯರ್ಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT