ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತಾಂತರಗೊಂಡ ಪರಿಶಿಷ್ಟರಿಗೆ SC ಸ್ಥಾನ ನೀಡುವುದಕ್ಕೆ ದಲಿತಪರ ಸಂಘಟನೆಗಳ ವಿರೋಧ?

ಮುಸ್ಲಿಂ, ಕ್ರೈಸ್ತ ಧರ್ಮಕ್ಕೆ ಮತಾಂತರ– ‌ನ್ಯಾ. ಬಾಲಕೃಷ್ಣನ್‌ ಆಯೋಗದಿಂದ 2 ದಿನ ಅಭಿಪ್ರಾಯ ಸಂಗ್ರಹ
Published 2 ಸೆಪ್ಟೆಂಬರ್ 2024, 0:31 IST
Last Updated 2 ಸೆಪ್ಟೆಂಬರ್ 2024, 0:31 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ, ‘ಪರಿಶಿಷ್ಟ ಜಾತಿ’ ಸ್ಥಾನ ನೀಡಿ ಮೀಸಲಾತಿ ಸೌಲಭ್ಯ ಕಲ್ಪಿಸಬಾರದೆಂಬ ಸ್ಪಷ್ಟ ನಿಲುವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್‌ ನೇತೃತ್ವದ ವಿಚಾರಣಾ ಆಯೋಗದ ಮುಂದೆ ಮಂಡಿಸಲು ರಾಜ್ಯದ ದಲಿತಪರ ಸಂಘಟನೆಗಳು ಮುಂದಾಗಿವೆ.

ಪರಿಶಿಷ್ಟ ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡಬೇಕೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ  ನ್ಯಾಯಮೂರ್ತಿ ‌ಕೆ.ಜಿ. ಬಾಲಕೃಷ್ಣನ್‌ ನೇತೃತ್ವದ ವಿಚಾರಣಾ ಆಯೋಗವನ್ನು ನೇಮಿಸಿದೆ. ನಿವೃತ್ತ ಐಎಎಸ್‌ ಅಧಿಕಾರಿ ಡಾ. ರವೀಂದರ್‌ ಕುಮಾರ್‌ ಜೈನ್‌ ಮತ್ತು ಪ್ರಾಧ್ಯಾಪಕಿ ಸುಷ್ಮಾ ಯಾದವ್‌ ಅವರು ಆಯೋಗದ ಸದಸ್ಯರಾಗಿದ್ದಾರೆ. ಸೋಮವಾರದಿಂದ (ಸೆ. 2) ಎರಡು ದಿನ ಆಯೋಗವು ರಾಜ್ಯಕ್ಕೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಲಿದೆ.

ರಾಷ್ಟ್ರಪತಿಯವರ ಆದೇಶದ ಪ್ರಕಾರ, ಮತಾಂತರದ ನಂತರ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್‌ ಧರ್ಮವನ್ನು ಅನುಸರಿಸುವವರಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನ ದೊರೆಯುತ್ತದೆ. ರಾಷ್ಟ್ರಪತಿ ಕಾಲ ಕಾಲಕ್ಕೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖವಾಗದ ಧರ್ಮಕ್ಕೆ (ಮುಸ್ಲಿಂ, ಕ್ರೈಸ್ತ) ಮತಾಂತರಗೊಂಡ, ಚಾರಿತ್ರಿಕವಾಗಿ ಪರಿಶಿಷ್ಟ ಜಾತಿಯವರಾಗಿ ಇರುವವರಿಗೆ ಪರಿಶಿಷ್ಟ ಜಾತಿ ಸ್ಥಾನ ಕೊಡಬೇಕೇ ಎಂಬುದನ್ನು ಈ ಆಯೋಗವು ಪರಿಶೀಲನೆ ನಡೆಸಲಿದೆ. 

ಬೇರೆ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಯ ವ್ಯಕ್ತಿಗಳ ಪದ್ಧತಿ, ಸಂಪ್ರದಾಯ, ಸಾಮಾಜಿಕ ಸ್ಥಾನಮಾನ, ಅವರು ಅನುಭವಿಸುತ್ತಿದ್ದ ಶೋಷಣೆ ಮತ್ತು ತಾರತಮ್ಯದಲ್ಲಿ ಆಗಿರುವ ಬದಲಾವಣೆ ಕುರಿತು ಕೂಡ ಆಯೋಗವು ಪರಿಶೀಲನೆ ನಡೆಸಲಿದೆ. ಈ ಜನರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡುವುದರಿಂದ ಆಗುವ ಪರಿಣಾಮಗಳನ್ನೂ ಅಧ್ಯಯನ ಮಾಡಲಿದೆ.

‘ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ, ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಮೀಸಲಾತಿ ಕೋಟಾದಿಂದ ಕಡಿತಗೊಳಿಸಿ ದಲಿತ ಮುಸ್ಲಿಂ, ದಲಿತ ಕ್ರೈಸ್ತರಿಗೆ ನೀಡಬಾರದು. ಯಾವ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೋ ಆ ಧರ್ಮಕ್ಕೆ ನಿಗದಿಪಡಿಸಿದ ಮೀಸಲಾತಿ ಕೋಟಾದಿಂದ ಕಡಿತಗೊಳಿಸಿ ಕೊಡುವುದಾದರೆ ನಮ್ಮ ಅಭ್ಯಂತರ ಇಲ್ಲ’ ಎಂದು ಆಯೋಗದ ಮುಂದೆ ಪ್ರತಿಪಾದಿಸಲು ದಲಿತ ಸಂಘಟನೆಗಳ ಪ್ರಮುಖರು ಚರ್ಚೆ ನಡೆಸಿದ್ದಾರೆ.

‘ಕೆ.ಜಿ. ಬಾಲಕೃಷ್ಣನ್‌ ನೇತೃತ್ವದ ವಿಚಾರಣಾ ಆಯೋಗವು ರಾಜ್ಯಮಟ್ಟದ ಅಧಿಕಾರಿಗಳ ಜೊತೆ ಸೋಮವಾರ ಚರ್ಚೆ ನಡೆಸಲಿದೆ. ಈ ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳ ಸಹಿತ ಹಾಜರಾಗುವಂತೆ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ರಾಜ್ಯ ವಕ್ಫ್ ಮಂಡಳಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಆಯೋಗವು ಅಂಬೇಡ್ಕರ್‌ ಭವನದಲ್ಲಿ ಸಾರ್ವಜನಿಕರಿಂದ ಮಂಗಳವಾರ ಅಭಿಪ್ರಾಯ ಸಂಗ್ರಹಿಸಲಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಒದಗಿಸಬೇಕಾದ ಮಾಹಿತಿಗಳಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಆಗಸ್ಟ್‌ 23ರಂದೇ ಆಯೋಗವು ಪತ್ರ ಬರೆದಿದೆ. ಒಟ್ಟು 15 ಪ್ರಶ್ನೆಗಳಿಗೆ ಮಾಹಿತಿ ಒದಗಿಸುವಂತೆ ಸೂಚಿಸಿದೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಸಂಬಂಧಿಸಿದಂತೆ ಯಾವುದಾದರೂ ಅಧ್ಯಯನ ನಡೆದಿದೆಯೇ? ಹೀಗೆ ಮತಾಂತರಗೊಂಡವರನ್ನು ಹಾಲಿ ಇರುವ ಪರಿಶಿಷ್ಟ ಜಾತಿಗೆ ಸೇರಿಸಿದರೆ ಆಗಬಹುದಾದ ಪರಿಣಾಮಗಳೇನು? ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮತ್ತು ಅಲ್ಪಸಂಖ್ಯಾತರಿಗೆ ರಾಜ್ಯದ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಎಷ್ಟು?1956 ನ. 1 ರಿಂದ ಇಲ್ಲಿಯವರೆಗೆ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಪ್ರತಿವರ್ಷ ಮೀಸಲಿಟ್ಟ ಹಣ ಮತ್ತು ಆಗಿರುವ ವೆಚ್ಚದ ಮಾಹಿತಿ ಒದಗಿಸಬೇಕು ಎಂದೂ ಆಯೋಗ ಪತ್ರದಲ್ಲಿ ತಿಳಿಸಿದೆ.

‘ಮತಾಂತರಗೊಂಡ ಪರಿಶಿಷ್ಟರ ಅಂಕಿಅಂಶ ಇಲ್ಲ’

‘ಪರಿಶಿಷ್ಟ ಜಾತಿಯವರಿಗೆ ಸಂಬಂಧಿಸಿದಂತೆ 1960ರ ನಂತರದ ಮಾಹಿತಿಗಳು ಸರ್ಕಾರದ ಬಳಿ ಲಭ್ಯವಿದೆ. ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಯ ಮಾಹಿತಿಗಳಿವೆ. ಆದರೆ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರ ಅಂಕಿಅಂಶ ಇಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ‘ಬಲವಂತದ ಮತಾಂತರ ನಿಷೇಧಿಸುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ’ (ಮತಾಂತರ ನಿಷೇಧ) ಕಾಯ್ದೆ 2022ರಿಂದ ರಾಜ್ಯದಲ್ಲಿ ಜಾರಿಯಲ್ಲಿದೆ. ಕಾಯ್ದೆ ಜಾರಿಗೆ ಬಂದ ನಂತರ ಮತಾಂತರಗೊಂಡರೆ, ಅಂಥವರ ಮಾಹಿತಿ ಸಂಗ್ರಹಿಸಲು ಅವಕಾಶವಿದೆ. ಆದರೆ, ಸದ್ಯಕ್ಕೆ ಅಂತಹ ಯಾವುದೇ ಮಾಹಿತಿ ಇಲ್ಲ’ ಎಂದೂ ಅವರು ತಿಳಿಸಿದರು.

ಆಯೋಗ ಕೇಳಿದ ಮಾಹಿತಿಗಳೇನು?

l ರಾಜ್ಯದಲ್ಲಿ 1956ರ ನ. 1ರಿಂದ ಇಲ್ಲಿಯವರೆಗೆ ಪರಿಶಿಷ್ಟ ಜಾತಿ, ತುಳಿತಕ್ಕೆ ಒಳಗಾದ ವರ್ಗಗಳ ಅಂಕಿಅಂಶ‌

l ಪರಿಶಿಷ್ಟ ಜಾತಿ ಮತ್ತು ಉಪ ಜಾತಿಗಳನ್ನು ‘ಪರಿಶಿಷ್ಟ ಜಾತಿ’ ಪಟ್ಟಿಯಲ್ಲಿ ಸೇರಿಸಿರುವ ವರ್ಷಾವಾರು ವಿವರ ಮತ್ತು ಸೇರಿಸಲು ಕಾರಣವಾದ ಅಂಶ

l ಪರಿಶಿಷ್ಟ ಜಾತಿಯ ಜನರ ಅಭಿವೃದ್ಧಿ ಮತ್ತು ಪ್ರಗತಿಯನ್ನು ಅಳೆಯಲು ಬಳಸಿದ ಆರ್ಥಿಕ ಮತ್ತು ಸಾಮಾಜಿಕ ಮಾನದಂಡ– ಸೂಚ್ಯಂಕಗಳು

l ಪರಿಶಿಷ್ಟ ಜಾತಿಯವರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡು ವಿಶೇಷ ಕ್ರಮಗಳ ನೀತಿ, ದತ್ತಾಂಶ ಮಾಹಿತಿ

l 1956ರ ನ. 1 ರಿಂದ ಇಲ್ಲಿಯವರೆಗೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಯವರ ದಾಖಲೆ

l 1956ರ ನ. 1 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ನಡೆದ ಸಾಮಾನ್ಯ ಮತ್ತು ಧಾರ್ಮಿಕ ಆಧಾರಿತ ಜನಗಣತಿ ವಿವರ

l ಚಾರಿತ್ರಿಕವಾಗಿ ಪರಿಶಿಷ್ಟ ಜಾತಿಯವರಾಗಿದ್ದು, ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರಿಗೆ ರೂಪಿಸಿದ ಯೋಜನೆಗಳ ಮಾಹಿತಿ

l ಚಾರಿತ್ರಿಕವಾಗಿ ಪರಿಶಿಷ್ಟ ಜಾತಿಯವರಾಗಿದ್ದು, ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರ ಪ್ರಗತಿ ಅಳೆಯಲು ಬಳಸಿದ ಮಾನದಂಡಗಳು

l ರಾಜ್ಯದಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮೀಯರ ಪದ್ಧತಿಗಳು, ಸಂಪ್ರದಾಯಗಳು, ಆಚರಣೆಗಳು 

l ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರ ಬದಲಾದ ಪದ್ಧತಿಗಳು, ಸಂಪ್ರದಾಯಗಳು, ಆಚರಣೆ (ಅಸ್ಪೃಶ್ಯತೆ).

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT