ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವನಗುಡಿ ವಾರ್ಡ್‌ ಹೆಸರು ಬದಲಾವಣೆ: ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

Published 8 ಆಗಸ್ಟ್ 2024, 19:21 IST
Last Updated 8 ಆಗಸ್ಟ್ 2024, 19:21 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವನಗುಡಿ ವಾರ್ಡ್‌’ ಹೆಸರನ್ನು ‘ದೊಡ್ಡಗಣಪತಿ ವಾರ್ಡ್‌’ ಎಂದು ಬದಲಾಯಿಸುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಸಂಬಂಧ, ಪೂರ್ವ ಆಂಜನೇಯ ರಸ್ತೆಯ ಸತ್ಯಲಕ್ಷ್ಮಿ ರಾವ್‌ ಸೇರಿದಂತೆ ಐವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್‌.ಪಿ.ಶಂಕರ್‌, ‘ಬಸವನಗುಡಿ ಬೆಂಗಳೂರಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ. ಆದರೆ, ನಗರಾಭಿವೃದ್ಧಿ ಇಲಾಖೆ 2023ರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಬಸವನಗುಡಿ ವಾರ್ಡ್‌ ಹೆಸರನ್ನು ದೊಡ್ಡಗಣಪತಿ ಎಂದು ಬದಲಾಯಿಸಲು ನಿರ್ಧರಿಸಿದೆ. ಹೆಸರು ಬದಲಾವಣೆ ಮಾಡದಂತೆ ಸರ್ಕಾರಕ್ಕೆ ಆದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ವಾರ್ಡ್‌ ಅಥವಾ ನಗರದ ಹೆಸರು ಬದಲಾಯಿಸುವ ವಿಚಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಷಯವಲ್ಲ. ಹೆಸರು ಬದಲಾವಣೆಯಿಂದ ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ತೊಂದರೆ ಆಗುತ್ತದೆ ಎಂಬುದನ್ನು ಅರ್ಜಿದಾರರು ಸಾಬೀತುಪಡಿಸಿಲ್ಲ. ಹಾಗಾಗಿ, ಈ ಅರ್ಜಿ ವಜಾಗೊಳಿಸಲಾಗುತ್ತಿದೆ’ ಎಂದು ಹೇಳಿತು.

‘ಹೆಸರು ಬದಲಾಯಿಸದಂತೆ ಸರ್ಕಾರಕ್ಕೆ ಮನವಿ ನೀಡಲಾಗಿದ್ದರೂ ಅದನ್ನು ಪರಿಗಣಿಸಿಲ್ಲ. ಇದು ಬಸವನಗುಡಿ ನಿವಾಸಿಗಳ ಭಾವನಾತ್ಮಕ ವಿಚಾರ. ಹಾಗಾಗಿ, ಹಳೆಯ ಹೆಸರು ಉಳಿಸಿಕೊಳ್ಳುವಂತೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT