ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿಗೆ ಪ್ರಯತ್ನ: ಬೊಮ್ಮಾಯಿ

ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಸಿ.ಎಂ ಬೊಮ್ಮಾಯಿ ಭರವಸೆ
Last Updated 4 ಜೂನ್ 2022, 20:11 IST
ಅಕ್ಷರ ಗಾತ್ರ

ಮಧುರೆ (ಚಿತ್ರದುರ್ಗ): ‘ಉಪ್ಪಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಸೌಲಭ್ಯ ಕಲ್ಪಿಸಲು ಕುಲಶಾಸ್ತ್ರೀಯ ಅಧ್ಯಯನ ವರದಿ ಅಂಗೀಕರಿಸಿ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಯತ್ನಿಸುವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊಸದುರ್ಗ ತಾಲ್ಲೂಕಿನ ಬ್ರಹ್ಮ ವಿದ್ಯಾನಗರದಲ್ಲಿ ಭಗೀರಥ ಗುರುಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಗೀರಥ ಜಯಂತಿಯಲ್ಲಿ ಅವರು ಮಾತನಾಡಿದರು.

‘ಮೀಸಲಾತಿ ಕುರಿತ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಸಂಬಂಧಿ ಸಿದ ಇಲಾಖೆಗೆ ಕಳುಹಿಸಲಾಗುವುದು. ಮೀಸಲಾತಿ ಕುರಿತ ತೀರ್ಪುಗಳನ್ನು ಪರಿಶೀಲಿಸಿ ನ್ಯಾಯಕೊಡುತ್ತೇವೆ. ಬೇರೆ ವರ್ಗಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುವೆ’ ಎಂದರು.

‘ಭದ್ರಾ ನಾಲೆಗೆ ಭಗೀರಥ ಮಹರ್ಷಿ ಹೆಸರಿಡಲಾಗುವುದು. ಭಗೀರಥ ಏಕಶಿಲಾ ಮೂರ್ತಿ, ಥೀಮ್‌ ಪಾರ್ಕ್‌ ಹಾಗೂ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸಲಾಗುವುದು’ ಎಂದು ತಿಳಿಸಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ‘ಉಪ್ಪಾರ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಿದ್ದು, ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸಬೇಕಿದೆ. ಕೆ.ಮೇತ್ರಿ ಅವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದರು.

‘ಎಸ್‌. ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಠಕ್ಕೆ 500 ಎಕರೆ ಜಮೀನು ಮಂಜೂರು ಮಾಡಿದ್ದರು. ಈ ಜಮೀನಿನ ಗುತ್ತಿಗೆ ಅವಧಿ 2011ಕ್ಕೆ ಮುಕ್ತಾಯವಾಗಿದೆ. ಇದನ್ನು ಗುರುಪೀಠಕ್ಕೆ ಶಾಶ್ವತವಾಗಿ ಮಂಜೂರು ಮಾಡಬೇಕು’ ಎಂದರು.

ಪ್ರಶಸ್ತಿ ಪ್ರದಾನ:‌ ಬಿಹಾರದ ಉಪಮುಖ್ಯಮಂತ್ರಿ ರೇಣುದೇವಿ, ಕೇಂದ್ರ ಸಚಿವ ಕಪಿಲ್‌ ಮೋರೇಶ್ವರ್‌ ಪಾಟೀಲ್‌ ಅವರಿಗೆ ‘ಭಗೀರಥ ಶ್ರೀ’, ಜಯದೇವ ಹೃದ್ರೋಗ ಆಸ್ಪತ್ರೆಯ ಸಿ.ಎನ್‌.ಮಂಜುನಾಥ್‌ ಅವರಿಗೆ ‘ಭಗೀರಥ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿವಮೂರ್ತಿ ಮುರುಘಾ ಶರಣರು, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಎಂ. ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜ, ಬಿ.ಸಿ.ನಾಗೇಶ್‌, ಬಿ.ಸಿ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT