ಬೆಂಗಳೂರು: ‘ಮುಂದಿನ ತಿಂಗಳು ರಾಜ್ಯ ಬಜೆಟ್ ಇರುವ ಹಿನ್ನೆಲೆಯಲ್ಲಿ ಹಲವು ಯೋಜನೆಗಳ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ರಾಜ್ಯದ ಸಂಸದರ ಜೊತೆ ಸಭೆ ನಡೆಸಲಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯ ಕೋರಲಾಗಿದೆ. ರಾಜ್ಯ ಬಜೆಟ್, ಹಣಕಾಸಿನ ಪರಿಸ್ಥಿತಿ, ಜಿಎಸ್‌ಟಿ, ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ’ ಎಂದರು.
‘ಪಕ್ಷದ ವರಿಷ್ಠರ ಭೇಟಿಗೂ ಸಮಯ ಕೋರಲಾಗಿದೆ. ಸಂಜೆಯೊಳಗೆ ಭೇಟಿಯ ಸಮಯ ನಿಗದಿ ಆಗಲಿದೆ’ ಎಂದೂ ಮುಖ್ಯಮಂತ್ರಿ ತಿಳಿಸಿದರು.
‘ಅಂತರರಾಜ್ಯ ಜಲವಿವಾದ ವಿಷಯದಲ್ಲಿ ನ್ಯಾಯಾಲಯಗಳಲ್ಲಿ ರಾಜ್ಯದ ಪರ ವಾದಿಸುತ್ತಿರುವ ವಕೀಲರ ತಂಡದೊಂದಿಗೆ ಚರ್ಚಿಸಿ, ರಾಜ್ಯದ ಮುಂದಿನ ನಡೆಯ ಬಗ್ಗೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು’ ಎಂದೂ ಹೇಳಿದರು.