ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳಿಗೆ ಪ್ರಮಾಣಪತ್ರ ಸಹಿತ ತರಬೇತಿ; ₹10 ಲಕ್ಷ ಸಾಲ ಸೌಲಭ್ಯ

ಪಿಎಂಕೆವಿವೈ ಯೋಜನೆಯಡಿ ತರಗತಿ ನಡೆಸಲು ಸಿದ್ಧತೆ
Last Updated 10 ಸೆಪ್ಟೆಂಬರ್ 2018, 18:02 IST
ಅಕ್ಷರ ಗಾತ್ರ

ಬೆಂಗಳೂರು: ಕೋಪದ ಕೈಗೆ ಬುದ್ಧಿ ಕೊಟ್ಟು ಜೈಲು ಸೇರಿ ಪಶ್ಚಾತಾಪ ಪಡುತ್ತಿರುವ ಕೈದಿಗಳು, ಬಿಡುಗಡೆಯಾದ ನಂತರ ಹೊರಗೆ ಹೋಗಿ ಏನು ಮಾಡುವುದೆಂಬ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಆದರೆ, ಆ ಭಯ ಇನ್ನಿರಲ್ಲ. ಏಕೆಂದರೆ, ಪ್ರತಿಯೊಬ್ಬ ಕೈದಿಗೂ ಪ್ರಮಾಣಪತ್ರ ಸಹಿತವಾಗಿ ವಾಣಿಜ್ಯೋದ್ಯಮದ ತರಬೇತಿಕೊಡಿಸಲು ಕಾರಾಗೃಹ ಇಲಾಖೆ ತೀರ್ಮಾನ ಕೈಗೊಂಡಿದೆ.

ಸ್ವ–ಉದ್ಯೋಗ ಕೈಗೊಳ್ಳಲು ಇಚ್ಛಿಸುವ ಯುವಕರಿಗೆ ವಾಣಿಜ್ಯೋದ್ಯಮ ಶಿಕ್ಷಣ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ (ಪಿಎಂಕೆವಿವೈ) ಕೈದಿಗಳಿಗೂ ತರಬೇತಿ ಕೊಡಿಸಲು ಇಲಾಖೆ ಹಲವು ತರಬೇತಿ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಆ ಮೂಲಕ ಕೈದಿಗಳ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ತರಬೇತಿ ಸಂಸ್ಥೆಗಳ ಮುಖ್ಯಸ್ಥರು, ಈಗಾಗಲೇ ಕಾರಾಗೃಹಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಕೈದಿಗಳಿಗೆ ಯಾವ ಯಾವ ತರಬೇತಿ ನೀಡಿದರೆ ಅನುಕೂಲ ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಅಂತಿಮ ಸಭೆ ನಡೆಸಲಿರುವ ಕಾರಾಗೃಹಗಳ ಅಧಿಕಾರಿಗಳು ಹಾಗೂ ಸಂಸ್ಥೆಗಳ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಹಾಕಿ ತರಬೇತಿಗೆ ಚಾಲನೆ ನೀಡಲಿದ್ದಾರೆ.

‘ಜೈಲಿನಲ್ಲಿ ತೋಟಗಾರಿಕೆ, ಬಡಗಿ, ಟೈಲರಿಂಗ್, ಬೇಕರಿ, ಅಡುಗೆ ಹಾಗೂ ಗೃಹೋಪಯೋಗಿ ಕೆಲಸದ ಬಗ್ಗೆ ಕೈದಿಗಳಿಗೆ ತರಬೇತಿ ನೀಡಲಾಗುತ್ತಿದೆ. ಆದರೆ, ಈ ತರಬೇತಿಗಳಿಗೆ ಯಾವುದೇ ಪ್ರಮಾಣ ಪತ್ರ ನೀಡಲಾಗುತ್ತಿಲ್ಲ. ಕೈದಿಗಳು ಬಿಡುಗಡೆಯಾಗಿ ಹೊರಗೆ ಹೋದ ನಂತರ, ಸ್ವಯಂ ಉದ್ಯೋಗ ಆರಂಭಿಸಲು ಆರ್ಥಿಕ ಸಹಾಯ ಸಿಗುತ್ತಿಲ್ಲ. ಸಾಲ ಕೊಡುವವರು ಪ್ರಮಾಣಪತ್ರ ಕೇಳುತ್ತಿದ್ದಾರೆ. ಅದರಿಂದ ಹಲವು ಕೈದಿಗಳು, ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಅದೇ ಕಾರಣಕ್ಕೆ ಪ್ರಮಾಣಪತ್ರ ಸಹಿತವೇ ಕೈದಿಗಳಿಗೆ ತರಬೇತಿ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

150 ದಿನಗಳ ತರಬೇತಿ: ‘ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ (ಪಿಎಂಕೆವಿವೈ) ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಅದನ್ನು ಪಡೆದ ಲಕ್ಷಾಂತರ ಮಂದಿ, ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ಅದಕ್ಕೆ ಬೇಕಾದ ಹಣದ ವ್ಯವಸ್ಥೆಯನ್ನೂ ತರಬೇತಿ ಸಂಸ್ಥೆಗಳೇ ಮಾಡಿಕೊಟ್ಟಿವೆ’ ಎಂದು ಅಧಿಕಾರಿ ಹೇಳಿದರು.

‘ಯೋಜನೆಯಡಿ ಸಹಾಯಧನ ಸಮೇತವಾಗಿ 150 ದಿನ (ಪ್ರತಿದಿನ 2ರಿಂದ 4 ಗಂಟೆ) ತರಬೇತಿ ನೀಡಲಾಗುತ್ತದೆ. ಜೈಲಿನಲ್ಲಿ ನೀಡುತ್ತಿರುವ ತರಬೇತಿಗಳಿಗೆ ಹೆಚ್ಚು ಕೈದಿಗಳು ಬರುತ್ತಿಲ್ಲ.ಪಿಎಂಕೆವಿವೈ ತರಬೇತಿ ಆರಂಭವಾದರೆ, ಸಹಾಯಧನ ಸಿಗುವುದೆಂಬ ಕಾರಣಕ್ಕಾದರೂ ಕೈದಿಗಳು ಬರಬಹುದು. ಹೀಗಾಗಿ, ಈ ಯೋಜನೆಯನ್ನು ಆಯ್ದುಕೊಳ್ಳಲಾಗಿದೆ. ಇಲ್ಲಿ ತರಬೇತಿ ಪಡೆದರೆ, ಅದು ಡಿಪ್ಲೋಮಾ ಹಾಗೂ ಐಟಿಐ ಕೋರ್ಸ್‌ಗೆ ಸಮ ಆಗಲಿದೆ’ ಎಂದು ಅವರು ವಿವರಿಸಿದರು.

‘ತರಬೇತಿ ಪಡೆದು ಸ್ವ– ಉದ್ಯೋಗ ಆರಂಭಿಸುವವರಿಗೆ ಮೂರು ಹಂತಗಳಲ್ಲಿ ಮುದ್ರಾ ಯೋಜನೆಯಡಿ ಜಾಮೀನು ಇಲ್ಲದೆ ₹ 50 ಸಾವಿರದಿಂದ ₹ 10 ಲಕ್ಷದವರೆಗೆ ಸಾಲ ನೀಡಲು ಅವಕಾಶವಿದೆ. ಆ ಸಂಬಂಧ ಹಲವು ಬ್ಯಾಂಕ್ ಅಧಿಕಾರಿಗಳ ಜತೆಯೂ ಚರ್ಚೆ ನಡೆಸುತ್ತಿದ್ದೇವೆ’ ಎಂದರು.

‘ಪಿಎಂಕೆವಿವೈ ಅಡಿ 100ಕ್ಕೂ ಹೆಚ್ಚು ತರಬೇತಿಗಳನ್ನು ನೀಡಲು ಅವಕಾಶವಿದೆ. ಆದರೆ, ಜೈಲಿನ ನಿಯಮಾವಳಿ ಪ್ರಕಾರ ಎಲ್ಲ ತರಬೇತಿಗಳನ್ನು ಕೈದಿಗಳಿಗೆ ಕೊಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಯಾವ್ಯಾವ ತರಬೇತಿಗಳನ್ನು ಕೈದಿಗಳಿಗೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಎಲ್ಲವೂ ಅಂತಿಮವಾದ ನಂತರ, ಆಸಕ್ತ ಕೈದಿಗಳನ್ನು ಬ್ಯಾಚ್‌ಗಳಾಗಿ ವಿಂಗಡಿಸಿ ತರಗತಿಗಳನ್ನು ಆರಂಭಿಸಲಿದ್ದೇವೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT