ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ತಾಪಮಾನ ಪ್ರತಿ ವರ್ಷವೂ ಏರುಗತಿ

Published 21 ಏಪ್ರಿಲ್ 2024, 21:51 IST
Last Updated 21 ಏಪ್ರಿಲ್ 2024, 21:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೆಲ ವರ್ಷಗಳಿಂದ ಬೇಸಿಗೆಯ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದು ಜಾಗತಿಕ ತಾಪಮಾನದ ಪರಿಣಾಮದ ಮುನ್ಸೂಚನೆಯೆಂದು ವಿಶ್ಲೇಷಿಸಲಾಗಿದೆ.

ಈ ವರ್ಷ ಮಾರ್ಚ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನವನ್ನು 2011ರ ಮಾರ್ಚ್‌ನ ಗರಿಷ್ಠ ತಾಪಮಾನಕ್ಕೆ ಹೋಲಿಸಿದರೆ 1.8 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಹೆಚ್ಚಾಗಿದೆ. 2011ರ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಸಿಯಸ್ ವರದಿಯಾದರೆ, ಈ ವರ್ಷ 37.6 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. 2016ರ ಏಪ್ರಿಲ್‌ನಲ್ಲಿ ಗರಿಷ್ಠ ಉಷ್ಣಾಂಶ 39.2 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು. ಇದು ದಾಖಲೆಯ ಗರಿಷ್ಠ ಉಷ್ಣಾಂಶವಾಗಿದೆ. 

‘ಕೆಲ ವರ್ಷಗಳಿಂದ ತಾಪಮಾನದಲ್ಲಿ ಗಣನೀಯ ಏರಿಕೆಯಾಗುತ್ತಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು. 

ಈ ವರ್ಷ ಮಾರ್ಚ್‌ನಲ್ಲಿ ಮಳೆಯಾಗಿಲ್ಲ. ಏಪ್ರಿಲ್‌ನಲ್ಲಿಯೂ ನಿರೀಕ್ಷಿತ ಮಳೆ ಸುರಿಯಲಿಲ್ಲ. ಇದರಿಂದ ತಾಪಮಾನ ಏರಿಕೆಯಾಗಿದೆ. ನಗರದಲ್ಲಿ ಮಾರ್ಚ್‌ನಲ್ಲಿ ಸರಾಸರಿ 14.7 ಮಿ.ಮೀ. ಮತ್ತು ಏಪ್ರಿಲ್‌ನಲ್ಲಿ 61.77 ಮಿ.ಮೀ. ವಾಡಿಕೆ ಮಳೆ ಗುರುತಿಸಲಾಗಿದೆ. ಆದರೆ, ಈ ಬಾರಿ ಎರಡು ತಿಂಗಳಲ್ಲೂ 2 ಎಂಎಂ ಗಿಂತ ಕಡಿಮೆ ಮಳೆಯಾಗಿದೆ.

ಹಸಿರುಮನೆ ಅನಿಲಗಳ ಹೆಚ್ಚಿದ ಹೊರಸೂಸುವಿಕೆ, ಗಿಡ–ಮರಗಳ ನಾಶ ಹಾಗೂ ನಗರೀಕರಣದಿಂದ ಹವಾಮಾನದಲ್ಲಿ ಬದಲಾವಣೆ ಆಗುತ್ತಿದೆಯೆಂದು ತಜ್ಞರು ವಿಶ್ಲೇಷಿಸಿದ್ದಾರೆ. 

‘ಪ್ರತಿ ವಾರ್ಡ್‌ನಲ್ಲಿ ಕಿರು ಅರಣ್ಯವನ್ನು ನಿರ್ಮಿಸಬೇಕಿದೆ. ಸಸ್ಯ ವರ್ಗದ ಹೊದಿಕೆ ಇದ್ದಲ್ಲಿ ತಾಪಮಾನ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಹಸಿರು ಹೊದಿಕೆಯ ನಷ್ಟವು ತಾಪಮಾನ ಹೆಚ್ಚಳಕ್ಕೆ ನೇರವಾಗಿ ಸಂಬಂಧಿಸಿದೆ. 1970ರ ದಶಕದಲ್ಲಿ ನಗರದಲ್ಲಿ ಸಸ್ಯವರ್ಗವು ಹೆಚ್ಚಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಟಿ.ವಿ. ರಾಮಚಂದ್ರ ವಿವರಿಸಿದರು. 

ನಗರದಲ್ಲಿ ಈವರೆಗೆ ಮಳೆಯಾಗದಿದ್ದರಿಂದ ತಾಪಮಾನ ಹೆಚ್ಚಳವಾಗಿದೆ. ಹಸಿರುಮನೆ ಅನಿಲಗಳ ಹೆಚ್ಚಳ ಮತ್ತು ನಗರೀಕರಣದಿಂದಾಗಿ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದೆ.
–ಪ್ರೊ.ಜೆ. ಶ್ರೀನಿವಾಸನ್, ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್‌ನ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT