ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆತ್ಮಹತ್ಯೆ ತಡೆಗೆ ಓಪನ್‌ ಬುಕ್ ಪರೀಕ್ಷೆ

ಬೆಂಗಳೂರು ವಿವಿ ಕುಲಪತಿ ಜಯಕರ ನೇತೃತ್ವದ ಸಮಿತಿ ಶಿಫಾರಸು
Published : 3 ಜನವರಿ 2024, 0:18 IST
Last Updated : 3 ಜನವರಿ 2024, 0:18 IST
ಫಾಲೋ ಮಾಡಿ
Comments

ಬೆಂಗಳೂರು: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು, ಒತ್ತಡ ಕಡಿಮೆ ಮಾಡಲು ಉನ್ನತ ಶಿಕ್ಷಣದಲ್ಲಿ ‘ಓಪನ್‌ ಬುಕ್‌’ ಪರೀಕ್ಷೆ ಪರಿಚಯಿಸಬೇಕು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.

2023ರ ಜುಲೈನಲ್ಲಿ ಪಿಇಎಸ್‌ ವಿಶ್ವವಿದ್ಯಾನಿಲಯದ ಬಿ.ಟೆಕ್‌ ವಿದ್ಯಾರ್ಥಿ ಆದಿತ್ಯಪ್ರಭು ಆತ್ಮಹತ್ಯೆ ಮಾಡಿಕೊಂಡ ನಂತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಒತ್ತಡ ಕುರಿತು ಅಧ್ಯಯನ ಮಾಡಿ, ವರದಿ ನೀಡಲು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಎಂ. ಜಯಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.  

ನಕಲು ಮಾಡುವಾಗ ಸಿಕ್ಕಿಬಿದ್ದ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಗಳಿಂದ ದೃಢಪಟ್ಟಿದೆ. ಇಂತಹ ಅವಘಡ ತಪ್ಪಿಸಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬೇಕಿದೆ. ಮುಕ್ತ ವಾತಾವರಣದಲ್ಲಿ ವ್ಯಾಸಂಗ ಮಾಡಲು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ‘ಓಪನ್‌ ಬುಕ್‌’ ಪರೀಕ್ಷಾ ವಿಧಾನ ಸಹಕಾರಿಯಾಗಿದೆ. ಹಾಗಾಗಿ, ಉನ್ನತ ಶಿಕ್ಷಣದ ಎಲ್ಲ ಹಂತ, ವಿಭಾಗಗಳಲ್ಲೂ ಇಂತಹ ಸಾಧ್ಯತೆಗಳನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿ ರಚಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ನೀಡಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಈಗಾಗಲೇ ಎಂಜಿನಿಯರಿಂಗ್‌ ಪರೀಕ್ಷೆಗಳಿಗೆ ‘ಓಪನ್‌ ಬುಕ್‌’ ವ್ಯವಸ್ಥೆಯನ್ನು ಪರಿಚಯಿಸಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕೈಪಿಡಿ ಅಥವಾ ಉಲ್ಲೇಖ ಸಾಮಗ್ರಿಯನ್ನು ಒದಗಿಸುತ್ತದೆ. ಇದರಿಂದ ಪರೀಕ್ಷಾ ಅಕ್ರಮಗಳ ಸಂಖ್ಯೆ ಕಡಿಮೆಯಾಗಿದೆ. ಕೋವಿಡ್‌ ವೇಳೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವೂ ಇದೇ ವಿಧಾನ ಅನುಸರಿಸಿತ್ತು.

‘ಓಪನ್‌ ಬುಕ್‌ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಮನಸ್ಸು ಕೇಂದ್ರೀಕರಿಸಬೇಕಾಗುತ್ತದೆ. ಅಧ್ಯಯನ ಮಾಡಿರಬೇಕಾಗುತ್ತದೆ. ಸಮಿತಿಯ ವರದಿ ಸ್ವೀಕರಿಸಲಾಗಿದೆ. ಸಂಪೂರ್ಣ ಓದಿದ ನಂತರ ಶಿಫಾರಸುಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಲಾಗುವುದು‘ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್.  

ಅಂಕಗಳ ಬದಲು ಗ್ರೇಡ್‌: 

ಈಗಿನ ಪರೀಕ್ಷಾ ಪದ್ಧತಿಯಲ್ಲಿ ಇರುವ ಅಂಕಗಳ ನೀಡುವಿಕೆ, ರ್‍ಯಾಂಕ್‌ ವ್ಯವಸ್ಥೆಯನ್ನು ಸಂಪೂರ್ಣ ಕೈಬಿಡಬೇಕು. ಸರಾಸರಿ ಅಂಕಗಳ ಆಧಾರದಲ್ಲಿ ಕೇವಲ ಗ್ರೇಡಿಂಗ್‌ ಪದ್ಧತಿ ಪರಿಚಯಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. 

ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಮಾನಸಿಕ ದೃಢತೆ ಮೂಡಿಸಲು ಕಾಲೇಜುಗಳಲ್ಲಿ ಪರಿಣತರನ್ನು ಒಳಗೊಂಡ ಯೋಗಕ್ಷೇಮ ಕೇಂದ್ರಗಳನ್ನು ತೆರೆಯಬೇಕು. ಮಾನಸಿಕ ಖಿನ್ನತೆಗಳಿಗೆ ಕಾರಣವಾಗುವ ಸಾಮಾಜಿಕ, ಕೌಟುಂಬಿಕ ಒತ್ತಡಗಳು, ಡ್ರಗ್ಸ್‌ ಮತ್ತಿತರ ವ್ಯಸನಗಳು, ಲಿಂಗ ತಾರತಮ್ಯ, ಲೈಂಗಿಕ ಕಿರುಕುಳಗಳು, ಅನಾರೋಗ್ಯಕರ ಸ್ಪರ್ಧೆಗಳ ನಿವಾರಣೆಗೂ ಒತ್ತು ನೀಡಬೇಕು ಎಂಬ ಸಲಹೆಗಳನ್ನು ನೀಡಿದೆ.

ಲೋಪ ಎತ್ತಿ ಹಿಡಿದ ಸಮಿತಿ

ಆತ್ಮಹತ್ಯೆ ಮಾಡಿಕೊಂಡಿದ್ದ ಬಿ.ಟೆಕ್‌ ವಿದ್ಯಾರ್ಥಿ ಆದಿತ್ಯಪ್ರಭು ಪ್ರಕರಣದಲ್ಲಿ ಪಿಇಎಸ್‌ ವಿಶ್ವವಿದ್ಯಾಲಯದ ಲೋಪಗಳನ್ನು ಸಮಿತಿ ಪಟ್ಟಿ ಮಾಡಿದೆ.

ವಿದ್ಯಾರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸುವಾಗ ತಪಾಸಣೆ ನಡೆಸಿಲ್ಲ. ಮೇಲ್ವಿಚಾರಣೆ ಮಾಡದೆ ಬಿಡಲಾಗಿದೆ. ಪರೀಕ್ಷೆ ಮುಗಿಯುವ 10 ನಿಮಿಷ ಮೊದಲು ಆತ ಸಿಕ್ಕಿಬಿದ್ದಿದ್ದಾನೆ. ಯಾವುದೇ ವಿಷಯ ತಜ್ಞರು ವಿದ್ಯಾರ್ಥಿಯ ಮೊಬೈಲ್ ಪರಿಶೀಲಿಸಲಿಲ್ಲ. ಮೊಬೈಲ್‌ ವಶಕ್ಕೆ ಪಡೆದ ತಕ್ಷಣ ಪರಿಶೀಲನೆ ನಡೆಸದೇ ಅವರ ತಾಯಿಗೆ ಕರೆ ಮಾಡಿದ್ದು ವಿದ್ಯಾರ್ಥಿ ಧೈರ್ಯ ಕಳೆದುಕೊಳ್ಳಲು ಪ್ರಮುಖ ಕಾರಣ. ಪರೀಕ್ಷಾ ಮುಖ್ಯಸ್ಥರು, ಮೇಲ್ವಿಚಾರಕರು ಕಾರ್ಯವಿಧಾನದಲ್ಲಿ ವಿಫಲರಾಗಿದ್ದಾರೆ ಎಂದು ಸಮಿತಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT