ಬೆಂಗಳೂರು: ‘ವಿದ್ಯುತ್ ಬಿಲ್ ಸೇರಿ ವಿವಿಧ ಶುಲ್ಕಗಳನ್ನು ಆನ್‌ಲೈನ್ (ಯುಪಿಐ) ಮೂಲಕ ಸ್ವೀಕರಿಸದೇ ಇರಲು ಕಾರಣ ಏನು ಎಂಬುದಕ್ಕೆ ಇದೇ 23ರ ವೇಳೆಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸಲು ವಿಫಲವಾದರೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾಗುತ್ತದೆ’ ಎಂದು ಹೈಕೋರ್ಟ್, ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಈ ಸಂಬಂಧ ಹೊಸಕೋಟೆ ನಿವಾಸಿ ಸೀತಾಲಕ್ಷ್ಮಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು, ‘ಹೈಕೋರ್ಟ್ ಈ ಹಿಂದೆ ನೀಡಿರುವ ಸೂಚನೆಯಂತೆ ವಿದ್ಯುತ್ ಬಿಲ್ ಸೇರಿ ವಿವಿಧ ಶುಲ್ಕಗಳನ್ನು ಯುಪಿಐ ಮೂಲಕ ಸ್ವೀಕರಿಸುವ ವ್ಯವಸ್ಥೆ ಜಾರಿಗೊಳಿಸುವ ವಿಚಾರವಾಗಿ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.
ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಇದು ಕೊನೆಯ ಅವಕಾಶ. ಇದೇ 23ರ ವೇಳೆಗೆ ಪ್ರಮಾಣ ಪತ್ರ ಸಲ್ಲಿಸಬೇಕು. ತಪ್ಪಿದರೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ ಸ್ಪಷ್ಟನೆ ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ ಈ ಹಿಂದಿನ ವಿಚಾರಣೆಯಲ್ಲಿ, ‘ಇಡೀ ಜಗತ್ತು ಡಿಜಿಟಲ್ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವಾಗ, ನೀವು ಮಾತ್ರ ಆನ್‌ಲೈನ್ ಪಾವತಿಗಳನ್ನು ಯಾಕೆ ಸ್ವೀಕರಿಸುತ್ತಿಲ್ಲ? ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿತ್ತು.
ಪ್ರಕರಣವೇನು?:
‘ವಾಣಿಜ್ಯ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿರುವ ಕಾರಣ ಸಾಮರ್ಥ್ಯ ಪ್ರಮಾಣವನ್ನು ಹೆಚ್ಚಿಸಿ’ ಎಂದು ಅರ್ಜಿದಾರರು ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಎಂಜಿನಿಯರ್, ₹16 ಸಾವಿರ ಪಾವತಿಸುವಂತೆ ತಿಳಿಸಿದ್ದರು. ಇದರನ್ವಯ ಅರ್ಜಿದಾರರು ನಗದು ಪಾವತಿಸಲು ಕಚೇರಿಗೆ ತೆರಳಿದಾಗ, ಡಿಡಿ ಅಥವಾ ಆರ್‌ಟಿಜಿಎಸ್ ಮೂಲಕ ಹಣ ಪಾವತಿಸುವಂತೆ ಸೂಚಿಸಿದ್ದರು. ‘ನನಗೆ 65 ವರ್ಷವಾಗಿದ್ದು, ಓಡಾಡಲು ಸಾಧ್ಯವಿಲ್ಲ. ಹಾಗಾಗಿ, ಆನ್‌ಲೈನ್ ಮೂಲಕ ಹಣ ಪಾವತಿಸುತ್ತೇನೆ’ ಎಂದು ಅರ್ಜಿದಾರರು ತಿಳಿಸಿದ್ದರು. ಆದರೆ ಎಂಜಿನಿಯರ್, ಇದಕ್ಕೆ ಅವಕಾಶ ನೀಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.