ಬೆಂಗಳೂರು: ‘ಹಲವು ಪುರುಷರ ವಿರುದ್ಧ ಅನಗತ್ಯ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವ ಕೊಡಗು ಜಿಲ್ಲೆ ಕುಶಾಲಗರ ತಾಲ್ಲೂಕಿನ ಮುಳ್ಳುಸೋಗೆ ನಿವಾಸಿಯಾದ 33 ವರ್ಷದ ದೀಪಿಕಾ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಎಲ್ಲ ಸೂಚನೆ ಹೊರಡಿಸಲು ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿ’ ಎಂದು ಹೈಕೋರ್ಟ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.
ಈ ಸಂಬಂಧ ದೀಪಿಕಾಳ ಕಿರುಕುಳಕ್ಕೆ ತುತ್ತಾದ ಹತ್ತನೇ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ, ಸುಳ್ಳು ಪ್ರಕರಣಗಳನ್ನು ದಾಖಲಿಸುವವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ’ ಎಂದು ತಿಳಿಸಿದೆ.
‘ಪ್ರಕರಣದ ಪ್ರತಿವಾದಿಯಾಗಿರುವ ದೀಪಿಕಾ ಈಗಾಗಲೇ ಹಲವು ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪರಾಧಿಕ ಪಿತೂರಿ ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 498ಎ ಅಡಿ 10 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈಕೆ ಪುನಃ ಯಾರಾದರೂ ಅಮಾಯಕರ ವಿರುದ್ಧ 11ನೇ ಕೇಸು ದಾಖಲಿಸುವುದನ್ನು ತಡೆಯಬೇಕಾದರೆ ಈಕೆಯ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ’ ಎಂದು ನ್ಯಾಯಪೀಠ ಡಿಜಿಪಿಗೆ ನಿರ್ದೇಶಿಸಿದೆ.
‘ದೀಪಿಕಾ ಬಗೆಗಿನ ವಿವರಗಳು ಹಲವು ಪೊಲೀಸ್ ಠಾಣೆಗಳಲ್ಲಿ ಲಭ್ಯ ಇವೆ. ಈ ಮಹಿಳೆ ಅನಗತ್ಯವಾಗಿ ಪುರುಷರ ವಿರುದ್ಧ ದೂರು ನೀಡುವುದನ್ನು ನಿಲ್ಲಿಸಬೇಕಿದೆ. ಕಳೆದೊಂದು ದಶಕದಲ್ಲಿ ಈಕೆ 10 ಕೇಸು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿ ಅಹವಾಲು ಸಲ್ಲಿಸುವಂತೆ ದೀಪಿಕಾಗೆ ಈ ಹಿಂದಿನ ವಿಚಾರಣೆ ವೇಳೆ ಅವಕಾಶ ನೀಡಲಾಗಿತ್ತು. ಆದರೆ, ಆಕೆ ಕೋರ್ಟ್‌ಗೆ ಗೈರು ಹಾಜರಾಗಿದ್ದಾರೆ’ ಎಂದು ನ್ಯಾಯಪೀಠ ತಿಳಿಸಿದೆ.
‘ಈಕೆಯ ಉದ್ದೇಶ ಕಿರುಕುಳ ನೀಡುವುದೇ ಆಗಿದೆ. ಆದರೆ, ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ಬಂಧನಕ್ಕೆ ಒಳಗಾಗಿ ನಂತರ ಜಾಮೀನಿನ ಮೇಲೆ ಹೊರಬಂದು ವಿಚಾರಣೆ ಎದುರಿಸಿ ಖುಲಾಸೆಯಾಗಿರುವುದು ಗಮನಾರ್ಹ’ ಎಂಬ ಅಂಶವನ್ನು ನ್ಯಾಯಪೀಠ ಆದೇಶದಲ್ಲಿ ದಾಖಲಿಸಿದೆ.
ಯಾವುದೇ ಪುರುಷನ ವಿರುದ್ಧ ದೀಪಿಕಾ ಪ್ರಕರಣ ದಾಖಲಿಸಲು ಬಂದರೆ ಪೊಲೀಸರು ಸುಮ್ಮನೆ ಕೇಸು ದಾಖಲಿಸದೆ ಆಕೆಯ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರ ಮುಂದಿನ ಕ್ರಮ ಜರುಗಿಸಬೇಕು-ಎಂ.ನಾಗಪ್ರಸನ್ನ ನ್ಯಾಯಮೂರ್ತಿ
‘ಒಂದು ದಶಕದಲ್ಲಿ ಒಬ್ಬ ಮುಸ್ಲಿಂ ಮತ್ತು ಉಳಿದ ಒಂಬತ್ತು ಹಿಂದೂ ಸಮುದಾಯದ ಯುವಕರ ವಿರುದ್ಧ; ಮದುವೆ ಮಾಡಿಕೊಂಡು ಮೋಸ ಎಸಗಿದ ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಕೌಟುಂಬಿಕ ದೌರ್ಜನ್ಯದ... ಹೀಗೆ ಹಲವು ಬಗೆಯ ದೂರುಗಳನ್ನು ದೀಪಿಕಾ ದಾಖಲಿಸಿದ್ದಾರೆ. ಈ ದೂರುಗಳಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ. ಅನಗತ್ಯ ಮತ್ತು ಕ್ಷುಲ್ಲಕ ದೂರುಗಳನ್ನು ನೀಡುವುದೇ ದೀಪಿಕಾಗೆ ಅಭ್ಯಾಸವಾಗಿದೆ’ ಎಂದು ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮೂರ್ತಿ ಡಿ.ನಾಯಕ್ ಆಕೆಯ ಈ ಹಿಂದಿನ 9 ಕೇಸುಗಳ ವಿವರಗಳನ್ನು ನ್ಯಾಯಪೀಠಕ್ಕೆ ಒದಗಿಸಿದ್ದರು.
‘ಹನಿ ಟ್ರ್ಯಾಪ್ ಸ್ವಭಾವದ ಈಕೆಯ ಕಾರ್ಯಶೈಲಿಯನ್ನು ಗಮನಿಸಿದಾಗ ಪ್ರತಿ ಪ್ರಕರಣದಲ್ಲೂ ಈಕೆಯ ನಡೆ ಸಂಶಯಾಸ್ಪದವಾಗಿದೆ. ಹೀಗಾಗಿ ಅರ್ಜಿದಾರರಾದ ಹಾಸನ ಜಿಲ್ಲೆಯ ಸಕಲೇಶಪುರದ ಬಾಳುಗದ್ದೆಯ ನಿವಾಸಿಯೂ ಆದ ದೀಪಿಕಾಳ ಹತ್ತನೇ ಪತಿ ಪಿ.ಕೆ.ವಿವೇಕ ಹಾಗೂ ಅವರ ಕುಟುಂಬದ ಐವರು ಸದಸ್ಯರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಕುಶಾಲನಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.