ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BJP-JDSನವರು ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡುತ್ತಿದ್ದಾರೆ: ಡಿಕೆಶಿ

Published 12 ಫೆಬ್ರುವರಿ 2024, 13:04 IST
Last Updated 12 ಫೆಬ್ರುವರಿ 2024, 13:04 IST
ಅಕ್ಷರ ಗಾತ್ರ

ರಾಮನಗರ: ‘ಬಿಜೆಪಿ ಮತ್ತು ಜೆಡಿಎಸ್‌ನವರು ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡುತ್ತಿದ್ದಾರೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ (ಇ.ಡಿ) ಏನು ಮಾಡಿಸುತ್ತಿದ್ದಾರೆ ಎಂದು ಎಲ್ಲವೂ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದು ಹಿಂದೆ ನಮ್ಮ ಜಿಲ್ಲೆಯವರಷ್ಟೇ ಅಲ್ಲದೆ ಬೇರೆಯವರೂ ಹೇಳಿದ್ದರು. ನಾನು ಎಲ್ಲದಕ್ಕೂ ತಯಾರಿದ್ದೇನೆ. ಯಾವುದಕ್ಕೂ ಹೆದರುವವನಲ್ಲ. ನನ್ನನ್ನು ಕಟ್ಟಿ ಹಾಕಲು ಅದೇನು ರಾಜಕಾರಣ ಮಾಡುತ್ತಾರೊ ಮಾಡಲಿ’ ಎಂದು ತಿರುಗೇಟು ನೀಡಿದರು.

‘ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡರು ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು, ಹಿಂದೆ ಮೋದಿ ವಿರುದ್ಧ ಏನು ಹೇಳಿಕೆ ನೀಡಿದ್ದರು ಎಂದು ನೆನಪಿಸಿಕೊಳ್ಳಲಿ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಹೇಳಿದ್ದಾಗ, ನಮ್ಮ ಮನೆಯಲ್ಲಿ ಜಾಗ ಕೊಡ್ತಿನಿ ಎಂದು ಮೋದಿ ಹೇಳಿದ್ದರಲ್ಲವೆ’ ಎಂದು ಕಾಲೆಳೆದರು.

‘ರಾಜ್ಯಪಾಲರ ಭಾಷಣದಲ್ಲಿ ಉಪ್ಪು–ಹುಳಿ–ಖಾರವಿಲ್ಲ. ಅವರಿಂದ ಸುಳ್ಳು ಭಾಷಣ ಮಾಡಿಸಿದ್ದಾರೆ’ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ‘ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, 5 ಕೆ.ಜಿ ಅಕ್ಕಿ ಬದಲು ಹಣ, ಯುವನಿಧಿ ಜಾರಿಯಾಗಿರೋದು ಸುಳ್ಳಾ? ಸರ್ಕಾರ ಮಾಡಿರುವುದನ್ನೇ ರಾಜ್ಯಪಾಲರು ಹೇಳಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಬಿಜೆಪಿಯವರು ರಾಮನ ಹೆಸರಿನಲ್ಲಿ ಮತ ಪಡೆಯಲು ಮುಂದಾಗಿದ್ದಾರೆ. ರಾಮ ಅಥವಾ ಹನುಮಂತ ಅವರ ಆಸ್ತಿನಾ? ಅವರು ನಮ್ಮವರಲ್ಲವೇ, ಹಿಂದೂ ಧರ್ಮ ನಮ್ಮದಲ್ಲವೇ? ಕೆಂಗಲ್ ಹನುಮಂತಯ್ಯ ಅವರು ಕೆಂಗಲ್‌ನಲ್ಲಿ ಆಂಜನೇಯ ದೇವಸ್ಥಾನ ಕಟ್ಟಿಲ್ಲವೆ? ಬಿಜೆಪಿಯವರು ಅದೇನು ಮಾತನಾಡುತ್ತಾರೊ ಮಾತನಾಡಲಿ. ಕೇಸರಿ ಸೇರಿದಂತೆ ಯಾವ ಬಣ್ಣದ ಶಾಲು ಬೇಕಾದರೂ ಸದನಕ್ಕೆ ಹಾಕಿಕೊಂಡು ಬರಲಿ. ಅವರು ರಾಜಕಾರಣ ಮಾಡಬೇಕಲ್ಲವೆ?’ ಎಂದು ವ್ಯಂಗ್ಯವಾಡಿದರು.

'ಹಿಂದೆಯೂ ಒಂದಾಗಿದ್ದರು’

‘ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸಹೋದರರನ್ನು ಕಟ್ಟಿ ಹಾಕಲು ಬದ್ಧ ವೈರಿಗಳು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅವರು ಈಗಷ್ಟೇ ಅಲ್ಲ, ಹಿಂದೆಯೂ ಒಂದಾಗಿದ್ದರು. ಸುರೇಶ್ ಅವರ ಎದುರು ಹಿಂದೊಮ್ಮೆ ಒಬ್ಬರೇ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಆದರೆ, ಸುರೇಶ್ ಅವರು ಮಾಡಿರುವ ಅಭಿವೃದ್ಧಿ ಕೆಲಸವನ್ನು ರಾಜ್ಯದ ಮತ್ಯಾವ ಸಂಸದರೂ ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ. ಸುರೇಶ್ ವಿರುದ್ಧ ಸ್ಪರ್ಧಿಸಲು ಮುಂದಾಗಿರುವವರು ತಮ್ಮ ಕೈಲಿ ಅಧಿಕಾರವಿದ್ದಾಗ ಏನು ಮಾಡಿದ್ದಾರೆ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT