ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕವನ್ನು ಬರ್ಬಾದ್‌ ಮಾಡುವುದೇ ಕಾಂಗ್ರೆಸ್ ಸರ್ಕಾರದ ಅಸಲಿ ಮಾಡೆಲ್: BJP ಕಿಡಿ

Published 2 ಜುಲೈ 2024, 10:49 IST
Last Updated 2 ಜುಲೈ 2024, 10:49 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಮುಗ್ಗಟ್ಟು ಕುರಿತು ಸರ್ಕಾರಕ್ಕೆ ಇಂಧನ ಇಲಾಖೆ ಬರೆದ ಪತ್ರವನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ಘಟಕ ಸರ್ಕಾರದ ವಿರುದ್ದ ಕಿಡಿಕಾರಿದೆ.

ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, 'ಕರ್ನಾಟಕವನ್ನು ಎಲ್ಲಾ ವಲಯಗಳಲ್ಲಿಯೂ ಸಂಪೂರ್ಣ ಬರ್ಬಾದ್‌ ಮಾಡುವುದೇ ಕಾಂಗ್ರೆಸ್‌ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್. ಸುಭಿಕ್ಷವಾಗಿದ್ದ ಕರ್ನಾಟಕವನ್ನು ಒಂದು ವರ್ಷದಲ್ಲಿ ಹಾಳು ಮಾಡಿದ ಸಂಪೂರ್ಣ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ' ಎಂದು ವಾಗ್ದಾಳಿ ನಡೆಸಿದೆ.

'ರಾಜ್ಯದ ಇಂಧನ ಇಲಾಖೆ ತನ್ನ ದೈನಂದಿನ ಚಟುವಟಿಕೆಗಳಿಗೂ ಹಣವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ, ಹೆಚ್ಚಿನ ಸಾಲ ಪಡೆಯಲು ಅನುಮತಿ ನೀಡಿ, ಇಲ್ಲವೇ ಸರ್ಕಾರದಿಂದ ಬರಬೇಕಿರುವ ಬಾಕಿಯನ್ನು ಪಾವತಿಸಿ ಎಂದು ಪತ್ರ ಬರೆದಿರುವುದು ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಷ್ಟರ ಮಟ್ಟಿಗೆ ಹದಗೆಡಿಸಿದೆ ಎಂಬುದರ ಸುಸ್ಪಷ್ಟ ನಿದರ್ಶನ' ಎಂದಿದೆ.

'ಸಿಎಂ ಸಿದ್ದರಾಮಯ್ಯ ಅವರೇ, ಕರ್ನಾಟಕ ಬರ್ಬಾದ್‌ ಆಗಿದೆ ಎಂಬುದು ನಿಮ್ಮ ಇಂಧನ ಇಲಾಖೆ ಬರೆದ ಪತ್ರದಿಂದ ಕೊನೆಗೂ ಋಜುವಾತಾಗಿದೆ. ಸಿದ್ದರಾಮಯ್ಯನವರು, ಕರ್ನಾಟಕ ಕಂಡ ಅತ್ಯಂತ ದುರ್ಬಲ ಸಿಎಂ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿಯ ಅಗತ್ಯವಿದೆಯೇ' ಎಂದು ಪ್ರಶ್ನಿಸಿದೆ.

ಶಿಕ್ಷಣ ಕ್ಷೇತ್ರ ಅಧೋಗತಿ ತಲುಪಿದೆ:

'ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಕ್ಷೇತ್ರ ಅಧೋಗತಿ ತಲುಪಿದ್ದು, ವಸತಿ ನಿಲಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಶುದ್ಧ ನೀರು ಪೂರೈಸುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ. ಸಚಿವರಾದ ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ ಗಾಢ ನಿದ್ರೆಯಿಂದ ಏಳದೇ ಇರುವುದರಿಂದ ರಾಜ್ಯದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳು ಈಗ ಸಮಸ್ಯೆಗಳ ಆಲಯವಾಗಿವೆ. ಗ್ರಂಥಾಲಯ ವ್ಯವಸ್ಥೆ ಇಲ್ಲ, ಶುಚಿ ಕಿಟ್‌ಗಳಿಲ್ಲ, ಸಿಬ್ಬಂದಿಯೂ ಇಲ್ಲ. ಕನಿಷ್ಠ ಮೂಲಸೌಕರ್ಯ ಒದಗಿಸದಷ್ಟು ದಯನೀಯ ಸ್ಥಿತಿಗೆ ತಲುಪಿದೆ' ಎಂದು ಕಿಡಿಕಾರಿದೆ.

'ಸಿದ್ದರಾಮಯ್ಯ ಸರ್ಕಾರ, ಭವಿಷ್ಯದ ಕನಸು ಹೊತ್ತು ವಿದ್ಯಾರ್ಥಿ ನಿಲಯಗಳಿಗೆ ಬರುವ ಬಡವರು, ದಲಿತರು, ಹಿಂದುಳಿದ ವರ್ಗಗಳು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಚೊಂಬು ಕೊಟ್ಟು ಕಲಿಕಾ ಸಾಮರ್ಥ್ಯ ಕುಸಿಯುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರಕ್ಕೆ ಬಡ ವಿದ್ಯಾರ್ಥಿಗಳ ವಸತಿ ನಿಲಯಗಳು ಅಂದ್ರೆ ಯಾಕಿಷ್ಟು ತಾತ್ಸಾರ ಎಂದು ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT