ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ | ಜಮೀರ್‌ ವಿರುದ್ಧ ಕೆರಳಿದ ಬಿಜೆಪಿ ಸದಸ್ಯರು

Published 13 ಡಿಸೆಂಬರ್ 2023, 14:58 IST
Last Updated 13 ಡಿಸೆಂಬರ್ 2023, 14:58 IST
ಅಕ್ಷರ ಗಾತ್ರ

ವಿಧಾನ ಪರಿಷತ್‌: ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆ ಪ್ರಚಾರದ ವೇಳೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಭಾಧ್ಯಕ್ಷ ಪೀಠದ ಬಗ್ಗೆ ನೀಡಿದ ಹೇಳಿಕೆ ವಿಧಾನಪರಿಷತ್‌ನಲ್ಲಿ ಬುಧವಾರ ಭಾರಿ ಗದ್ದಲಕ್ಕೆ ಕಾರಣವಾಯಿತು. ಜಮೀರ್‌ ಕ್ಷಮೆ ಯಾಚಿಸಲೇಬೇಕು ಎಂದು ಪಟ್ಟು ಹಿಡಿದ ಬಿಜೆಪಿ ಸದಸ್ಯರು, ಪ್ರಶ್ನೋತ್ತರ ಕಲಾಪ ಬಹಿಷ್ಕರಿಸಿ ಸಭಾತ್ಯಾಗ ನಡೆಸಿದರು.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್‍ನ ಯು.ಬಿ. ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಜಮೀರ್‌ ಮುಂದಾಗುತ್ತಿದ್ದಂತೆ, ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ, ವೈ.ಎ. ನಾರಾಯಣಸ್ವಾಮಿ, ತೇಜಸ್ವಿನಿಗೌಡ ಮತ್ತಿತರ ಸದಸ್ಯರು ಎದ್ದು ನಿಂತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಸಭಾಧ್ಯಕ್ಷ ಪೀಠಕ್ಕೆ ಅಗೌರವ ತೋರಿರುವವರಿಂದ ಉತ್ತರ ಕೊಡಿಸುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು. ಆಗ ಸದನದಲ್ಲಿ ಗದ್ದಲ ಉಂಟಾಯಿತು. ಪರಿಸ್ಥಿತಿ ತಿಳಿಗೊಳಿಸಲು ಸಭಾಪತಿ ಬಸವರಾಜ ಹೊರಟ್ಟಿ ಪ್ರಯತ್ನಿಸಿದರೂ ಬಿಜೆಪಿ ಸದಸ್ಯರು ಸಮಾಧಾನಗೊಳ್ಳಲಿಲ್ಲ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಜಮೀರ್, ‘ನಾನು ಎಲ್ಲಿಯೂ ಸಭಾಧ್ಯಕ್ಷ ಸ್ಥಾನಕ್ಕೆ ಅಗೌರವ ತೋರಿಸಿಲ್ಲ. ತೋರಿಸುವುದೂ ಇಲ್ಲ. ಮುಂದೆಯೂ ಆ ರೀತಿ ನಡೆದುಕೊಳ್ಳುವುದಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದರು.

ಸಭಾನಾಯಕ ಎನ್‌.ಎಸ್‌. ಬೋಸರಾಜು, ‘ಜಮೀರ್ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿರುವುದರಿಂದ ಮತ್ತೆ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅಲ್ಲದೆ, ಅವರು ಕೆಳಮನೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದರು. ಈ ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಪರಿಸ್ಥಿತಿ ತಹಬದಿಗೆ ಬಾರದ ಕಾರಣ ಸಭಾಪತಿ 10 ನಿಮಿಷ ಸದನ ಮುಂದೂಡಿದರು.

ಮತ್ತೆ ಸದನ ಸೇರಿದಾಗ ಬಿಜೆಪಿ ಸದಸ್ಯರು ತಮ್ಮ ಆಕ್ಷೇಪವನ್ನು ಮುಂದುವರೆಸಿದರು. ಆಗ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಪ್ರತಿಷ್ಠೆಯನ್ನು ಬಿಟ್ಟು ಕಲಾಪ ನಡೆಯಲು ಎಲ್ಲರೂ ಸಹಕಾರ ಕೊಡಬೇಕು’ ಎಂದು ಮನವಿ ಮಾಡಿದರು. ಗದ್ದಲ ಮುಂದುವರಿದಾಗ ಸಭಾಪತಿ ಮತ್ತೆ 10 ನಿಮಿಷ ಸದನ ಮುಂದೂಡಿದರು.

ಪುನಃ ಸಭೆ ಸೇರಿದಾಗ, ‘ಎರಡು ಬಾರಿ ಸದನ ಮುಂದೂಡಲಾಗಿದೆ. ಸಂಬಂಧಪಟ್ಟ ಸಚಿವರು ಉತ್ತರ ನೀಡಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಕಲಾಪ ನಡೆಸಲು ಸಹಕರಿಸಿ’ ಎಂದು ಸಭಾಪತಿ ಮನವಿ ಮಾಡಿದರು. ಆಗ ಕೋಟ ಶ್ರೀನಿವಾಸ ಪೂಜಾರಿ, ‘ಜಮೀರ್ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಈ ಸದನಲ್ಲಿ ಕ್ಷಮೆ ಯಾಚಿಸಬೇಕು ಅಥವಾ ಈ ವಿಷಯವನ್ನು ಹಕ್ಕು ಬಾಧ್ಯತಾ ಸಮತಿಗೆ ವಹಿಸಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ರಘುನಾಥ್ ರಾವ್‌ ಮಲ್ಕಾಪುರೆ, ‘ಜಮೀರ್ ಕ್ಷಮೆ ಕೇಳಬೇಕು ಇಲ್ಲವೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ನಾವು ಅವರ ಯಾವುದೇ ಪ್ರಶ್ನೆಗಳಿಗೆ ಉತ್ತರ ಬಯಸುವುದಿಲ್ಲ, ಕಲಾಪ ಬಹಿಷ್ಕರಿಸುತ್ತೇವೆ’ ಎಂದು ಗುಡುಗಿದರು. ಅಂತಿಮವಾಗಿ ಸಭಾಪತಿ ಪ್ರಶ್ನೋತ್ತರ ಕಲಾಪ ಆರಂಭಿಸುತ್ತಿದ್ದಂತೆ, ಜಮೀರ್ ವಿರುದ್ಧ ಘೋಷಣೆ ಕೂಗುತ್ತಾ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT