ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಹಿಂದೂ ವಿರೋಧಿ ಯಾಕೆ?: ಯತ್ನಾಳ ನೀಡಿದ ಕಾರಣಗಳಿವು...

Published 1 ಮಾರ್ಚ್ 2024, 8:36 IST
Last Updated 1 ಮಾರ್ಚ್ 2024, 8:36 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಹಿಂದೂ ವಿರೋಧಿ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಏಕೆ ಹಿಂದೂ ವಿರೋಧಿ ಎಂಬುದರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

ಕಾಂಗ್ರೆಸ್‌, ಸಂವಿಧಾನದ 25ನೇ ವಿಧಿಯ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಿತು. 28ನೇ ವಿಧಿಯ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಸಿದುಕೊಂಡು, ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ 30ನೇ ವಿಧಿ ಅನ್ವಯ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು. ಎಚ್‌ಆರ್‌ಸಿಇ ಕಾಯ್ದೆ 1951ರ ಮೂಲಕ ಹಿಂದೂ ದೇವಸ್ಥಾನದ ಹಣವನ್ನು ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಕುಟುಂಬಗಳನ್ನು ವಿಭಜಿಸಲು, ಒಗ್ಗಟ್ಟನ್ನು ಮುರಿಯಲು ವಿಚ್ಛೇದನ ಕಾಯ್ದೆ, ವರದಕ್ಷಿಣೆ ಕಾಯ್ದೆ, ಹಿಂದೂ ಕೋಡ್‌ ಬಿಲ್‌ ಅನ್ನು ಪರಿಚಯಿಸಿತು. ಆದರೆ, ಮುಸಲ್ಮಾನರ ವೈಯಕ್ತಿಕ ಕಾನೂನು ಮಂಡಳಿ ಅನ್ನು ಮುಟ್ಟುವ ಧೈರ್ಯಕ್ಕೆ ಹೋಗಲಿಲ್ಲ. ಬಹುಪತ್ನಿತ್ವ ಕಾನೂನುಬದ್ಧ ಆಗಿರುವುದರಿಂದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಯಿತು ಎಂದು ಯತ್ನಾಳ ಆರೋಪಿಸಿದ್ದಾರೆ.

ವಿಶೇಷ ವಿವಾಹ ಕಾಯ್ದೆ ಅನ್ನು 1951ರಲ್ಲಿ ಪರಿಚಯಿಸುವ ಮೂಲಕ ಮುಸಲ್ಮಾನ ಗಂಡು ಮಕ್ಕಳು, ಹಿಂದೂ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಅವಕಾಶ ನೀಡಿತು. ಅಲ್ಲದೆ, 1975ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮಗಳ ಹಕ್ಕನ್ನು ಕಸಿದುಕೊಳ್ಳಲಾಯಿತು, ಸಾವಿರಾರು ಜನರನ್ನು ಜೈಲಿಗೆ ಕಳುಹಿಸಲಾಯಿತು. ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ಜನ ಅಮಾಯಕರನ್ನು ಇದೇ ಕಾಂಗ್ರೆಸ್‌ ಪಕ್ಷ ಜೈಲಿಗೆ ಕಳುಹಿಸಿತು ಎಂದು ಕಿಡಿಕಾರಿದ್ದಾರೆ.

ಪೂಜಾ ಸ್ಥಳಗಳ ಕಾಯ್ದೆ ಮೂಲಕ ಹಿಂದೂಗಳ 40,000 ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿತು. ಅಲ್ಲದೆ, ವಕ್ಫ್ ಕಾಯ್ದೆ ಮೂಲಕ ಯಾವುದೇ ಭೂಮಿಯನ್ನು ತೆಗೆದುಕೊಳ್ಳುವ ಹಕ್ಕನ್ನು ಮುಸಲ್ಮಾನರು ಪಡೆದುಕೊಂಡರು. 2009ರಲ್ಲಿ ಕೇಸರಿ ಭಯೋತ್ಪಾದನೆ ಎಂಬ ಪದಪುಂಜವನ್ನು ಕಾಂಗ್ರೆಸ್‌ ಪಕ್ಷ ಪರಿಚಯಿಸಿತು ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT