ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

40 ಕಾಂಗ್ರೆಸ್‌ ಶಾಸಕರಿಂದ ರಾಜೀನಾಮೆ ಚಿಂತನೆ: ಸಂಸದ ಗೋವಿಂದ ಕಾರಜೋಳ

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕಾಂಗ್ರೆಸ್‌ನ 40 ಜನ ಶಾಸಕರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

‘ಯಾವುದೇ ವಿವೇಚನೆ, ಲೆಕ್ಕಾಚಾರ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ನಂತರ ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯುಂಟಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗದ ಹಿನ್ನೆಲೆಯಲ್ಲಿ ಬೇಸತ್ತಿರುವ ಕಾಂಗ್ರೆಸ್‌ನ 40 ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರು ಈಚೆಗೆ ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ದಿವಾಳಿಯ ಅಂಚಿಗೆ ತಲುಪಿದೆ. ಇದರ ವಿರುದ್ಧ ಒಬ್ಬೊಬ್ಬರೇ ಶಾಸಕರು ಬಂಡೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಿಕೊಳ್ಳಲು ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.

‘ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತದ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆ ಮುಂದುವರಿಸಲು ಹಣ ಬಿಡುಗಡೆ ಮಾಡಿಲ್ಲ. ಎಸ್‌ಸಿಪಿ– ಟಿಎಸ್‌ಪಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ₹ 24,000 ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಕೂಡಲೇ ಆ ಹಣವನ್ನು ವಾಪಸ್‌ ಹಾಕಿ ಪರಿಶಿಷ್ಟ ಜಾತಿ, ಪಂಗಡಗಳ ಪ್ರಗತಿಗಾಗಿ ವಿನಿಯೋಗ ಮಾಡಬೇಕು‘ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT