ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಕೋಮುದ್ವೇಷ ಬಿತ್ತುತ್ತಿರುವ ಬಿಜೆಪಿ, ಆರ್‌ಎಸ್‌ಎಸ್‌: ಲಕ್ಷ್ಮಣ ಟೀಕೆ

ಪೀಣ್ಯದಿಂದ ಒಂದು ಲಕ್ಷ ಕೇಸರಿ ಶಾಲು ರವಾನೆ
Last Updated 9 ಫೆಬ್ರುವರಿ 2022, 8:47 IST
ಅಕ್ಷರ ಗಾತ್ರ

ಮೈಸೂರು: ‘ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯೊಂದರಿಂದ ಸುಮಾರು ಒಂದು ಲಕ್ಷ ಕೇಸರಿ ಶಾಲುಗಳು ಕರಾವಳಿ ಜಿಲ್ಲೆಗಳಿಗೆ ರವಾನೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗ ನಡೆಯುತ್ತಿರುವ ಹಿಜಾಬ್‌– ಕೇಸರಿ ಶಾಲು ವಿವಾದವು ಬಿಜೆಪಿ, ಆರ್‌ಎಸ್‌ಎಸ್‌ ಷಡ್ಯಂತ್ರದ ಭಾಗವಾಗಿದೆ. ಫೆ.6 ರಂದು ಕೇಸರಿ ಶಾಲುಗಳು ಮತ್ತು 15 ಸಾವಿರ ಕೇಸರಿ ಪೇಟಾಗಳನ್ನು ಹಂಚಲಾಗಿದೆ. ಅದರ ಪ್ರಾಯೋಜಕತ್ವ ವಹಿಸಿದ್ದು ಯಾರೆಂಬುದು ಬಯಲಾಗಲಿ’ ಎಂದು ಒತ್ತಾಯಿಸಿದರು.

‘ಮೂರು ಜನ ಕಲ್ಲು ಹೊಡೆದರು ಎಂದು ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ? ಪರಿಸ್ಥಿತಿ ನಿಭಾಯಿಸುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕಲ್ಲು ಹೊಡೆಯಲು ಪ್ರೇರೇಪಿಸಿದ್ದು ಯಾರೆಂಬುದನ್ನು ಪತ್ತೆಹಚ್ಚಿ ಒದ್ದು ಒಳಗೆ ಹಾಕುವ ಬದಲು ರಜೆ ಘೋಷಿಸಿ ಮಕ್ಕಳ ಭವಿಷ್ಯ ಹಾಳುಮಾಡುತ್ತಿದ್ದೀರಿ’ ಎಂದು ಕಿಡಿಕಾರಿದರು.

‘ವಿವಾದದ ಕಿಡಿ ಹೊತ್ತಿಕೊಂಡಿರುವ ಜಿಲ್ಲೆಗಳಿಗೆ ಗೃಹಸಚಿವರು ಭೇಟಿ ಕೊಡಬೇಕಿತ್ತು. ಎಸ್ಪಿ, ಹಿರಿಯ ಪೊಲೀಸ್‌ ಅಧಿಕಾರಿಗಳು ಶಾಲೆ– ಕಾಲೇಜುಗಳಿಗೆ ಭೇಟಿ ನೀಡಬೇಕಿತ್ತು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಎಲ್ಲಿದ್ದಾರೆ? ಕೇಸರಿ ಶಾಲು ಎಂಬ ಕಾರಣಕ್ಕೆ ನೀವು ಸುಮ್ಮನಿದ್ದೀರಾ? ಮುಸ್ಲಿಮರು ಪ್ರತಿಭಟನೆಗಿಳಿದಿದ್ದರೆ ನೀವೆಲ್ಲಾ ಅಲ್ಲಿ ಹೋಗಿ ಮೊಕ್ಕಾಂ ಹೂಡುತ್ತಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ನಾರಾಯಣಗುರು ಸ್ತಬ್ಧಚಿತ್ರ ವಿಚಾರವಾಗಿ ಕರಾವಳಿ ಭಾಗದಲ್ಲಿ ಆಗಿರುವ ಹಿನ್ನಡೆಯನ್ನು ಸರಿಪಡಿಸಲು ಬಿಜೆಪಿಯವರು ಈ ವಿವಾದ ಸೃಷ್ಟಿಸಿದ್ದಾರೆ. 9–10ನೇ ತರಗತಿಯ ಮಕ್ಕಳಲ್ಲೂ ಕೋಮು ವಿಷ ಬೀಜ ಬಿತ್ತಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಕಿಡಿಕಾರಿದರು.

‘ಫೆ.14 ರಿಂದ ಬಜೆಟ್‌ ಅಧಿವೇಶನ ನಡೆಯಲಿದ್ದು, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಡಳಿತ ಪಕ್ಷದ ಬೆವರಿಳಿಸಲು ಸಿದ್ಧತೆ ನಡೆಸಿದ್ದರು. ಅದನ್ನು ತಿಳಿದುಕೊಂಡಿರುವ ಬಿಜೆಪಿ ಮುಖಂಡರು, ಚರ್ಚೆಯ ಹಾದಿ ತಪ್ಪಿಸಲು ಹಿಜಾಬ್‌ ವಿವಾದ ಮುನ್ನೆಲೆಗೆ ತಂದಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT