ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ– ರಾಜಕೀಯ ಮಿಶ್ರಣದ ಔಚಿತ್ಯ ಪರಿಶೀಲಿಸಬೇಕಾದ ಕಾಲವಿದು: ಬಿ.ಕೆ. ಚಂದ್ರಶೇಖರ್

Published 22 ಜನವರಿ 2024, 0:30 IST
Last Updated 22 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಮಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕರು ಭಾಗವಹಿಸದಿರುವುದು ಹಿಂದೂ ಧರ್ಮದ ವಿರುದ್ಧದ ನಿಲುವು ಎಂದು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಆದರೆ, ರಾಮಮಂದಿರಕ್ಕೆ ಕಿಂಚಿತ್ತೂ ನಮ್ಮ ವಿರೋಧ ಇಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.

‘ಮಂದಿರದ ಕಟ್ಟಡ ಪೂರ್ಣಗೊಳ್ಳಲು 10-12 ತಿಂಗಳು ಮೊದಲೇ ‍ರಾಮನ ಮೂರ್ತಿ ಪ್ರತಿಷ್ಠಾಪನೆ ಮತ್ತು ತರಾತುರಿಯಲ್ಲಿ ಮಂದಿರದ ಉದ್ಘಾಟನೆ ಮಾಡುವ ಕಲ್ಪನೆಯ ಹಿಂದೆ ರಾಜಕೀಯ ಲೆಕ್ಕಾಚಾರ ಇರುವುದು ಸ್ಪಷ್ಟ. ಆದ್ದರಿಂದ, ಕಾರ್ಯಕ್ರಮಕ್ಕೆ ಬಂದಿರುವ ಆಹ್ವಾನವನ್ನು ಗೌರವಯುತವಾಗಿ ತಿರಸ್ಕರಿಸುತ್ತೇವೆಂದು ಕಾಂಗ್ರೆಸ್‌ ನಾಯಕರು ಪ್ರಕಟಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ತಿರುಚಲಾಗಿದೆ’ ಎಂದಿದ್ದಾರೆ. 

‘ಹಿಂದೂ ಧರ್ಮದ ಆಚಾರ್ಯರು, ಗುರುಗಳು ಅನುಸರಿಸುತ್ತಿರುವ ಸಂಪ್ರದಾಯವನ್ನು ರಾಮನ ಪ್ರತಿಷ್ಠಾಪನೆಯ ಪವಿತ್ರ ಕಾರ್ಯದಲ್ಲಿ ಉಲ್ಲಂಘಿಸಲಾಗಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವ  ಪ್ರಧಾನಿಯ ಇಚ್ಛೆಯ ಹಿಂದಿನ ಪ್ರಚಾರದ ಉದ್ದೇಶವನ್ನು ನಾಲ್ಕು ಶಂಕರಾಚಾರ್ಯರು ಈಗಾಗಲೇ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಒಡಿಶಾದ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಮತ್ತು ಉತ್ತರಾಖಂಡದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ಮೋದಿಯವರು ಪ್ರತಿಷ್ಠಾಪನೆ ಮುಂದಾದರೆ, ಆಯೋಧ್ಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ’ ಎಂದಿದ್ದಾರೆ.

‘ಧರ್ಮ– ರಾಜಕೀಯ ಮಿಶ್ರಣದ ಔಚಿತ್ಯ ಮತ್ತು ಅಪಾಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾದ ಕಾಲವಿದು. ಇಂಥ ಪೂರ್ವಯೋಜಿತ, ಜನಸಾಮಾನ್ಯರ ಮನಸ್ಸು ಮತ್ತು ಹೃದಯದೊಳಗೆ ಧರ್ಮದ ಸೋಗಿನಲ್ಲಿ ತೀವ್ರಗತಿಯ ರಾಜಕೀಯ ಉದ್ರೇಕವನ್ನು ಕೆರಳಿಸುವುದಲ್ಲದೆ ಮತ್ತೇನು? ಸರ್ಕಾರದ (ರಾಜಕೀಯದ) ನೀತಿ, ನಿರ್ಧಾರ ಮಾರಕ ಎಂದು ಗ್ರಹಿಸಿದಾಗ ಮಾತ್ರ ಗಟ್ಟಿಯಾದ ಧಾರ್ಮಿಕ ಸಂವೇದನೆ ಹಿನ್ನೆಲೆಗೆ ಸರಿಯಬಹುದಷ್ಟೇ. ಅದರ ಹೊರತಾಗಿಯೂ ಧಾರ್ಮಿಕ ಭಾವನೆಗಳು– ವಿಷಮಾವಸ್ಥೆ ತೀಕ್ಷ್ಣವಾಗಿ ಜನರ ಆಂತರ್ಯದಲ್ಲಿದ್ದು, ಅದನ್ನು ತೆಗೆಯುವುದು ಸುಲಭ ಸಾಧ್ಯವಲ್ಲ. ಈವರೆಗೂ ಬಿಜೆಪಿ ಇಂಥ ಉತ್ಕಟ ಮನಸ್ಥಿತಿಯನ್ನು ಅದರ ಸೀಮಿತ ಲಾಭಕ್ಕಾಗಿ ಬಳಸಿಕೊಂಡಿದೆ’ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT