ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದುವೆ ಆಗುವ ಭರವಸೆ ಉಲ್ಲಂಘನೆ ಅತ್ಯಾಚಾರ ಆರೋಪ ಆಗದು: ಹೈಕೋರ್ಟ್‌

Published 11 ಜೂನ್ 2024, 20:00 IST
Last Updated 11 ಜೂನ್ 2024, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮದುವೆ ಆಗುವುದಾಗಿ ನೀಡಿದ್ದ ಭರವಸೆ ಉಲ್ಲಂಘಿಸಲಾಗಿದೆ ಎಂದ ಪ್ರಕರಣವನ್ನು ಅತ್ಯಾಚಾರ ಆರೋಪದಲ್ಲಿ ವಿಚಾರಣೆಗೆ ಒಳಪಡಿಸುವುದು ಅವಿವೇಕತನ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸದ್ಯ ಅಮೆರಿಕದಲ್ಲಿ ನೆಲೆಸಿರುವ ಕುಂದಾಪುರ ತಾಲ್ಲೂಕಿನ ಹಕ್ಲಾಡಿ ಗ್ರಾಮದ ಸಂತೋಷ್ ಶೆಟ್ಟಿ ವಿರುದ್ಧ ಅತ್ಯಾಚಾರ ಮತ್ತು ಅವರ ಕುಟುಂಬದವರ ವಿರುದ್ಧದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಸಲ್ಲಿಸಿರುವ ದೋಷಾರೋಪಪಟ್ಟಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ವಿವಾಹ ಆಗುವುದಾಗಿ ಸುಳ್ಳು ಭರವಸೆ ನೀಡುವುದು ಅತ್ಯಾಚಾರದ ಅಡಿಯಲ್ಲಿ ಅಪರಾಧ ಎನಿಸಿಕೊಳ್ಳುವುದಿಲ್ಲ’ ಎಂದು ಹೇಳಿದೆ.

ವಿಚಾರಣೆ ವೇಳೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ‘ಸಂತೋಷ್ ಶೆಟ್ಟಿ ವಿದೇಶಕ್ಕೆ ತೆರಳಿದ ನಂತರ ದೂರುದಾರ ಮಹಿಳೆಯೊಂದಿಗೆ ಹಲವು ದಿನಗಳ ಕಾಲ ವಾಟ್ಸ್‌ ಆ್ಯಪ್‌ ಸಂಭಾಷಣೆ ನಡೆಸಿರುವುದೇನೊ ನಿಜ. ಆದರೆ, ಎಲ್ಲಿಯೂ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಿರುವುದು ಕಂಡು ಬಂದಿಲ್ಲ. ಆದರೆ, ನಿಶ್ಚಿತಾರ್ಥ ಮುರಿದುಬಿದ್ದಿದೆ’ ಎಂದು ನ್ಯಾಯಪೀಠ ಹೇಳಿದೆ.

‘ಈ ಪ್ರಕರಣದಲ್ಲಿ ಅರ್ಜಿದಾರ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿಲ್ಲ. ಮದುವೆಯಾಗುವುದಾಗಿ ತಿಳಿಸಿ ಮುಂದಿನ ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ. ವಿವಾಹ ಮುರಿದು ಬಿದ್ದಿದೆ. ಈ ಪ್ರಕರಣದಲ್ಲಿ ಎಲ್ಲಿಯೂ ವಂಚನೆ ಆರೋಪ ಕಂಡುಬರುವುದಿಲ್ಲ’ ಎಂದು ತಿಳಿಸಿರುವ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದೆ. ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT