ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಮಾನ ತೆಗೆದ ಕಾಂಗ್ರೆಸ್ ನಾಯಕರು: ಬಿ.ಎಸ್.ಯಡಿಯೂರಪ್ಪ ಕಿಡಿ

Published 8 ಫೆಬ್ರುವರಿ 2024, 13:18 IST
Last Updated 8 ಫೆಬ್ರುವರಿ 2024, 13:18 IST
ಅಕ್ಷರ ಗಾತ್ರ

ದಾವಣಗೆರೆ: ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಮಾನ ತೆಗೆದಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ದಾವಣಗೆರೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ದುರಾಡಳಿತ ನೀತಿಗೆ ರೋಸಿ ಹೋಗಿರುವ ಜನರು ರಾಜ್ಯ ಸರ್ಕಾರವನ್ನು ಯಾವಾಗ ಕಿತ್ತು ಹಾಕುತ್ತೇವೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಭ್ರಷ್ಟಾಚಾರ ಮಿತಿ ಮೀರಿದ್ದು, ಅತ್ತ ಗ್ಯಾರಂಟಿಯೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇತ್ತ ಅಭಿವೃದ್ಧಿ ಕೆಲಸಗಳೂ ಆಗುತ್ತಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸಿ ದೆಹಲಿ ಚಲೋ ಎಂದು ಹೊರಟು, ಇಡೀ ದೇಶದ ಮುಂದೆ ತಮ್ಮ ಬಂಡವಾಳ ಬಯಲು' ಮಾಡಿಕೊಂಡಿದ್ದಾರೆ ಎಂದರು.

'ಸ್ವತಃ ಪ್ರಧಾನಿಗಳೇ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನೀತಿ ನಿಲುವುಗಳನ್ನು ಟೀಕಿಸಿದ್ದಾರೆ. ಒಕ್ಕೂಟ ವ್ಯವಸ್ಥೆ ಪ್ರಶ್ನಿಸುವ, ದೇಶ ವಿಭಜನೆಯ ಮಾತನಾಡುವ ಕಾಂಗ್ರೆಸ್ ಅನ್ನು ಸ್ವಲ್ಪ ದಿನಗಳಲ್ಲೇ ಅಪ್ರಸ್ತುತ ಮಾಡಲಿದ್ದಾರೆ. ಕೇಂದ್ರ ಹಣಕಾಸು ಸಚಿವರು ಕಾಂಗ್ರೆಸ್‌ ಸುಳ್ಳು ಆರೋಪಗಳಿಗೆ ಅಂಕಿ ಅಂಶದ ಸಮೇತ ಜನರ ಮುಂದೆ ಇಟ್ಟಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

'ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಜನರ ದುಡ್ಡಿನಲ್ಲಿ ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತುಗಳಲ್ಲಿ ಸುಳ್ಳು ಮಾಹಿತಿಯನ್ನು ಹೇಳಿ ಸಿಕ್ಕಿಹಾಕಿಕೊಳ್ಳುವ ಹೀನಾಯ ಪರಿಸ್ಥಿತಿಗೆ ಬಂದಿದೆ. ಬರ ಪರಿಹಾರ ಬಂದೇ ಇಲ್ಲ ಎಂದು ಜಾಹೀರಾತು ನೀಡಿದ್ದಾರೆ. ಆದರೆ ಈಗಾಗಲೇ ಕೇಂದ್ರ ಸರ್ಕಾರ ₹6000 ಕೋಟಿಗೂ ಹೆಚ್ಚು ವಿಪತ್ತು ನಿರ್ವಹಣಾ ಅನುದಾನ ನೀಡಿದೆ. ವಿಶೇಷ ಅನುದಾನ ನೀಡಿಲ್ಲ ಎಂದು ಸುಳ್ಳು ಹೇಳಿದೆ. ಹಣಕಾಸು ಆಯೋಗ ತನ್ನ ಅಂತಿಮ ವರದಿಯಲ್ಲಿ ಇಂತಹ ಯಾವುದೇ ಶಿಫಾರಸು ಮಾಡಿಲ್ಲ ಎಂದು ವಿತ್ತ ಸಚಿವರು ಹೇಳಿದ್ದಾರೆ. ಸುಳ್ಳು ಹೇಳುವುದು, ಸುಳ್ಳನ್ನು ಸಮರ್ಥಿಸಲು ಇನ್ನೂ ನೂರು ಸುಳ್ಳು ಹೇಳುವುದು. ಇದೆಲ್ಲವೂ ಮುಖ್ಯಮಂತ್ರಿಗಳ ಮಾತುಗಳಿಂದ ಅರ್ಥವಾಗಿದೆ. ದೆಹಲಿಗೆ ಹೋಗಿ ರಾಜ್ಯದ ಮಾನ ತೆಗೆದ ಈ ಕಾಂಗ್ರೆಸ್ ನಾಯಕರು ರಾಜ್ಯದ ಜನರಿಗೆ ಉತ್ತರದಾಹಿಗಳು ಎಂಬುದನ್ನು ಮರೆಯಕೂಡದು ಎಂದು' ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT