ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿಗಣತಿ ವಿರೋಧಿಸಲ್ಲ, ಅರೆಬೆಂದ ವರದಿ ಒಪ್ಪುವುದಿಲ್ಲ: ಬಿ.ವೈ. ವಿಜಯೇಂದ್ರ

ಬಿ.ವೈ.ವಿಜಯೇಂದ್ರಗೆ ಅದ್ಧೂರಿ ಸ್ವಾಗತ
Published 29 ನವೆಂಬರ್ 2023, 16:07 IST
Last Updated 29 ನವೆಂಬರ್ 2023, 16:07 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಹವಾನಿಯಂತ್ರಿತ (ಎ.ಸಿ) ಕೊಠಡಿಯಲ್ಲಿ ಕುಳಿತು ಸಿದ್ಧಪಡಿಸಿದ ಅರೆಬೆಂದ ವರದಿಯನ್ನು ಒಪ್ಪಲಾಗುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ವರದಿ ನಮಗೆ ಬೇಕಿದೆ’ ಎಂದರು.

‘ಕಾಂತರಾಜ್ ಆಯೋಗದ ವರದಿಯನ್ನು ಈ ಹಿಂದೆ ಅಸ್ತಿತ್ವದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿಯೇ ಸಲ್ಲಿಕೆಯಾಗಿತ್ತು. ಅದನ್ನು ಆಗ ಏಕೆ ಸ್ವೀಕರಿಸಲಿಲ್ಲ. ಈಗೇಕೆ ತುದಿಗಾಲಲ್ಲಿ ನಿಂತಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

‘ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಪಕ್ಷ ಸಂಘಟಿಸಲಾಗುವುದು. ರಾಜ್ಯದ ಜನ ದರಿದ್ರ ಸರ್ಕಾರ ಬಂದಿದೆ ಎಂದು ಶಾಪ ಹಾಕುತ್ತಿದ್ದಾರೆ. ನಮ್ಮ ಮೇಲೆ ಸುಮ್ಮನೆ ಶೇ 40ರಷ್ಟು ಕಮೀಷನ್ ಪಡೆದ ಆರೋಪ ಮಾಡಿ ಜನರ ಅನುಕಂಪದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನವರು ಈಗ ಶೇ 80ರಷ್ಟು ಕಮೀಷನ್ ಪಡೆಯುತ್ತಿದ್ದಾರೆ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ಕಾರ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಕುರಿತು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಜಯೇಂದ್ರ ನೇಮಕದಿಂದ ಪಕ್ಷಕ್ಕೆ ಬಲ ಬಂದಿದೆ. ಇಂದೇ ವಿಧಾನಸಭೆಗೆ ಚುನಾವಣೆ ನಡೆದರೂ ಬಿಜೆಪಿ 135ಕ್ಕೂ ಹೆಚ್ಚು ಸ್ಥಾನಗಳ ಗೆದ್ದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ವಾತಾವರಣ ಸೃಷ್ಟಿಯಾಗಿದೆ.

-ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ಕುಮಾರ್ ಬಂಗಾರಪ್ಪ ಗೈರು

ಬಿ.ವೈ. ವಿಜಯೇಂದ್ರ ಅಭಿನಂದನಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಗೈರಾದರು. ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಕುಮಾರ್ ಬಂಗಾರಪ್ಪ ಪಕ್ಷದ ವೇದಿಕೆಗಳಿಂದ ಬಹುತೇಕ ದೂರ ಉಳಿದಿದ್ದಾರೆ. ಈ ಕುರಿತು ಪ್ರತಿಕ್ರಿತಯೆ ಪಡೆಯಲು ‘ಪ್ರಜಾವಾಣಿ’ ದೂರವಾಣಿ ಕರೆ ಮಾಡಿ ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ‘ಚುನಾವಣೆಯಲ್ಲಿ ಸೋತ ನಂತರ ಕುಮಾರ್ ಬಂಗಾರಪ್ಪ ನೊಂದಿದ್ದಾರೆ. ಹೀಗಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ. ಅಭಿನಂದನಾ ಸಮಾರಂಭಕ್ಕೂ ಆಹ್ವಾನ ನೀಡಿದ್ದೆವು. ಆದರೆ ಬಂದಿಲ್ಲ. ರಾಜ್ಯ ಘಟಕದ ಅಧ್ಯಕ್ಷರು ಅವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿಪಡಿಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT