ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಹವಾನಿಯಂತ್ರಣರಹಿತ 148 ವಿದ್ಯುತ್ ಚಾಲಿತ ಬಸ್ಸುಗಳನ್ನು ಜೆಸಿಸಿ ಆಧಾರದಲ್ಲಿ ಕಾರ್ಯಾಚರಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹55 ಕೋಟಿ ವೆಚ್ಚದಲ್ಲಿ 127 ಬಸ್ಸುಗಳು ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯದ ರಾಜ್ಯ ನಗರ ಸಾರಿಗೆ ನಿಧಿ ಅಡಿ ಮಂಜೂರಾದ ₹29.13 ಕೋಟಿ ಅನುದಾನದಲ್ಲಿ 21 ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಪ್ರತಿ ಬಸ್ಸಿಗೆ ₹39.08 ಲಕ್ಷ ಸಹಾಯಧನ ನೀಡಿ ಪ್ರತಿ ಕಿ.ಮೀ.ಗೆ ₹41.01 ದರದಲ್ಲಿ ಜೆಸಿಸಿ ಆಧಾರದ ಮೇಲೆ ಓಡಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.