ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪ್ರಶ್ನಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯಲ್ಲಿ ಮಂಗಳವಾರ ಅರ್ಜಿದಾರರ ಪರ ವಕೀಲರು ಮತ್ತು ಸರ್ಕಾರದ ಪರ ವಕೀಲರು ತಮ್ಮ ವಾದವನ್ನು ಮಂಡಿಸಿದರು. ವಾದಾಂಶದ ತಿರುಳೇನು?
ಸರ್ಕಾರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅಂಕಿ ಅಂಶಗಳ ದತ್ತಾಂಶ ಅಗತ್ಯ. ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅರ್ಜಿದಾರರು ‘ಜಾತಿ ಗಣತಿ‘ ಎಂದು ತಪ್ಪಾಗಿ ಬಿಂಬಿಸುತ್ತಿದ್ದಾರೆ. ರಾಜ್ಯ ಸರ್ಕಾರ ಯಾವುದೇ ರೀತಿಯ ಜಾತಿ ಗಣತಿ ನಡೆಸುತ್ತಿಲ್ಲ. ಹಿಂದುಳಿದ ವರ್ಗಗಳ ಸ್ಥಿತಿಗತಿ ಅಧ್ಯಯನಕ್ಕಾಗಿ ಸಮೀಕ್ಷೆ ನಡೆಸಲು ಕಾನೂನಿನಲ್ಲಿ ಅವಕಾಶವಿದ್ದು, ಅದರ ಕಾನೂನು ಬದ್ಧತೆಯನ್ನು ಪ್ರಶ್ನಿಸಲು ಆಗದು. ಈ ಹಿಂದೆ ಹಾವನೂರು, ವೆಂಕಟರೆಡ್ಡಿ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳು ಇದೇ ರೀತಿಯ ಸಮೀಕ್ಷೆ ನಡೆಸಿವೆ. ಪ್ರತಿ 10 ವರ್ಷಗಳಿಗೆ ಒಮ್ಮೆ ಇಂತಹ ಸಮೀಕ್ಷೆ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ದತ್ತಾಂಶವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಆಯೋಗ ಹೊಂದಿದೆ.ಅಭಿಷೇಕ್ ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ ವಕೀಲ
ಸಮೀಕ್ಷೆ ವೇಳೆ ನಾಗರಿಕರನ್ನು ಗುರುತಿಸುವುದಕ್ಕಾಗಿ ಮಾತ್ರವೇ ಆಧಾರ್ ಕಾರ್ಡ್ ವಿವರ ಪಡೆಯಲಾಗುತ್ತದೆ. ಯಾವುದೇ ದತ್ತಾಂಶವನ್ನು ಸಂಗ್ರಹಿಸಲು ಮುಂದಾಗುವುದಿಲ್ಲ. ವಿವರಣೆ ನೀಡುವಂತೆ ಒತ್ತಾಯಿಸುವುದೂ ಇಲ್ಲ. ಇದು ನಾಗರಿಕರ ಸ್ವ–ಇಚ್ಛೆಗೆ ಬಿಟ್ಟ ವಿಚಾರ.ಕೆ.ರವಿವರ್ಮ ಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಪರ ವಕೀಲ
ಸಮೀಕ್ಷೆಯಡಿ ಪ್ರತಿಯೊಬ್ಬ ನಾಗರಿಕರಿಂದ ಸಮಗ್ರ ವಿವರ ಕಲೆ ಹಾಕಲಾಗುತ್ತಿದೆ ಮತ್ತು ಜಾತಿಯನ್ನೂ ನಿರ್ಧರಿಸಲಾಗುತ್ತಿದೆ ಎಂಬುದು ಅರ್ಜಿದಾರರ ವಾದ. ಹೀಗಿರುವಾಗ ಜಾತಿ ಗಣತಿಗೂ ಸಮೀಕ್ಷೆಗೂ ಇರುವ ವ್ಯತ್ಯಾಸವೇನು..?ನ್ಯಾ.ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ
ಸಂಗ್ರಹಿಸಿದ ದತ್ತಾಂಶಗಳನ್ನು ರಾಜಕೀಯ ಲಾಭಕ್ಕಾಗಿ ಪರಿರ್ವತಿಸಿಕೊಳ್ಳುವ ಉದ್ದೇಶ ಸಮೀಕ್ಷೆಯ ಹಿಂದೆ ಅಡಗಿದೆ. ಸಮೀಕ್ಷೆಯ ಕಸರತ್ತು ರಾಜಕೀಯ ಗುರಾಣಿಯಾಗುವುದರಲ್ಲಿ ಸಂಶಯವಿಲ್ಲವಿವೇಕ್ ಸುಬ್ಬಾರೆಡ್ಡಿ
ಸಮೀಕ್ಷೆ ನಡೆಸಲು ಸರ್ಕಾರ ಅತಿಯಾದ ಅತುರದಿಂದ ವರ್ತಿಸುತ್ತಿದೆ. ಕೆಲವು ವಿಚಾರಗಳು ನಿರ್ಧಾರವಾಗುವತನಕ ಸರ್ಕಾರ ಮತ್ತು ಆಯೋಗಕ್ಕೆ ಸಮೀಕ್ಷೆ ಮುಂದುವರಿಸುವಂತೆ ನಿರ್ದೇಶಿಸುವುದು ಅಗತ್ಯಎಸ್.ಶ್ರೀರಂಗ
ಮನಸ್ಸಿಗೆ ತೋಚಿದಂತೆ ಜಾತಿಗಳನ್ನು ಗುರುತಿಸಲಾಗಿದೆ. ಜಾತಿ ಗುರುತಿಸುವುದಕ್ಕೆ ಪೂರಕವಾಗಿ ಯಾವುದೇ ಪೂರ್ವಭಾವಿ ಅಧ್ಯಯನ ನಡೆಸಲಾಗಿಲ್ಲ. ಇದರಿಂದ ನಕಲಿ ಸಾಧ್ಯತೆಗಳು ಹೆಚ್ಚಾಗಲಿದ್ದು, ಜನರು ತಪ್ಪು ದತ್ತಾಂಶ ನೀಡುವ ಸಾಧ್ಯತೆ ಇದೆ. ಮಾಹಿತಿಯ ಖಾಸಗಿತನದ ಪ್ರಶ್ನೆಯೂ ಇದರಲ್ಲಿ ಅಡಕವಾಗಿದ್ದು, ಡಿಜಿಟಲ್ ರೂಪದಲ್ಲಿ ದಾಖಲಿಸಿದ ದತ್ತಾಂಶ ಸೋರಿಕೆಯಾಗುವುದನ್ನು ಅಲ್ಲಗಳೆಯಲಾಗದು. 2002ರ ಅಧಿಸೂಚನೆ ಪ್ರಕಾರ ರಾಜ್ಯದಲ್ಲಿ 207 ಜಾತಿಗಳನ್ನು ಗುರುತಿಸಲಾಗಿತ್ತು. 2015ರಲ್ಲಿ 1,351 ಜಾತಿಗಳನ್ನು ಗುರುತಿಸಲಾಯಿತು. 2025ರಲ್ಲಿ 1,561 ಜಾತಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕೆಲವು ಜಾತಿಗಳನ್ನು ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ಛಿದ್ರಗೊಳಿಸಲಾಗಿದೆ.ಅಶೋಕ ಹಾರನಹಳ್ಳಿ, ಅರ್ಜಿದಾರರ ಪರ ವಕೀಲ
ಸಮೀಕ್ಷೆಗಾಗಿ ಸರ್ಕಾರ ಮತ್ತು ಆಯೋಗ ನೀಡಿರುವ ಹ್ಯಾಂಡ್ ಬುಕ್‌ನಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸಂವಿಧಾನದ 342ನೇ ವಿಧಿಯಡಿ ನಿರ್ಬಂಧ ಇರುವುದರಿಂದ ಸಮೀಕ್ಷೆ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ.ಪ್ರಭುಲಿಂಗ ಕೆ.ನಾವದಗಿ, ಅರ್ಜಿದಾರರ ಪರ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.